

ಮುಧೋಳ: ಕಳೆದ ಐದು ವರ್ಷಗಳಿಂದ ಬಾಕಿ ಇರುವ ಕಬ್ಬಿನ ಬಿಲ್ ಹಣವನ್ನು ಕೂಡಲೇ ರೈತರ ಖಾತೆಗೆ ಸಂದಾಯ ಮಾಡಿ 2025-26ನೇ ಸಾಲಿನ ಕಬ್ಬಿನ ದರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ನಗರದ ಖಾಸಗಿ ಸಕ್ಕರೆ ಕಾರ್ಖಾನೆ ಎದುರು ರೈತರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಬಾಗಲಕೋಟೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದರು. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಂಚಾರಿ ಸಿಕ್ಕು ಉಂಟಾಗಿತ್ತು. ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಖಾಸಗಿ ಕಾರ್ಖಾನೆಯು ಕಳೆದ ಐದಾರು ವರ್ಷಗಳಿಂದ ಕೊನೆಯ ಬಿಲ್ ಹಣ ಪಾವತಿ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಬಾಕಿ ಬಿಲ್ ಹಣ ಪಾವತಿ ಮಾಡಬೇಕು. ಈ ವರ್ಷದ ಕಬ್ಬಿನ ದರವನ್ನು ಘೋಷಣೆಮಾಡಿ ಕಾರ್ಖಾನೆ ಪ್ರಾರಂಭ ಮಾಡಬೇಕು. ಖಾಸಗಿ ಕಾರ್ಖಾನೆಯ ಮಾಲೀಕರು ಹಾಗೂ ಅಧಿಕಾರಿಗಳು ಖುದ್ದಾಗಿ ಆಗಮಿಸಿ ದರ ಘೋಷಣೆ ಹಾಗೂ ಹಳೆಯ ಬಿಲ್ ಕೊಡುವ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಸುಭಾಸ ಶಿರಬೂರ, ಈರಪ್ಪ ಹಂಚನಾಳ, ರಮೇಶ ಹೂಗಾರ, ಹನಮಂತ ನವಾಬ, ದುಂಡಪ್ಪ ಯರಗಟ್ಟಿ, ಸುರೇಶ ಚಿಂಚಲಿ, ಬಸಪ್ಪ ಸಂಗಣ್ಣವವರ ಇತರರು ಇದ್ದರು.