

ಮಂಡ್ಯ: ದೇವನಹಳ್ಳಿಯಲ್ಲಿ ಹೋರಾಟಗಾರರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ರೈತರು, ರಾಜ್ಯಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಮೊಳಗಿದರು. ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ಹೋರಾಟಗಾರರ ಮೇಲೆ ದೌರ್ಜನ್ಯವೆಸಗಲಾಗಿದೆ. ಈ ಮೂಲಕ ರೈತರನ್ನು ಹತ್ತಿಕ್ಕಲು ರಾಜ್ಯಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು. ರೈತರಿಗೆ ಜಮೀನು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.
ಇನ್ನು ತೀವ್ರ ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಅನುಷ್ಠಾನಕ್ಕೆ ರಾಜ್ಯಸರ್ಕಾರ ಮುಂದಾಗಿರುವುದು ಸರಿಯಲ್ಲ. ರೈತರ ಗಮನಕ್ಕೆ ಬಾರದಂತೆ ಬೆಂಗಳೂರಿನಲ್ಲಿ ಸಭೆ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ವಹಿಸಬೇಕು. ಕೆಆರ್‌ಎಸ್‌ನಲ್ಲಿ ಯಾವುದೇ ಕಾರಣಕ್ಕೂ ಎರಡು ಯೋಜನೆ ಮಾಡಬಾರದು. ಇನ್ನೊಂದೆಡೆ ರೈತರಿಗೆ ಯೋಜನೆ ಮಾಡುವುದಿಲ್ಲವೆನ್ನುವಂತೆ ಭರವಸೆ ಕೊಟ್ಟಿದ್ದ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಇದೀಗ ಉಲ್ಟಾ ಹೊಡೆದಿರುವುದು ಬೇಸರದ ವಿಷಯ. ರಾಜ್ಯಸರ್ಕಾರ ಯೋಜನೆ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಿವಳ್ಳಿ ಚಂದ್ರಶೇಖರ್, ಹಲ್ಲೇಗೆರೆ ಶಿವರಾಂ ಇತರರಿದ್ದರು.