ಸಬ್ ಇನ್‌ಸ್ಪೆಕ್ಟರ್ ಈಶ್ವರ್ ವಿರುದ್ಧ ರೈತರ ಪ್ರತಿಭಟನೆ

12 HANUR 2
Published on

ಚಾಮರಾಜನಗರ: ಸಬ್ ಇನ್‌ಸ್ಪೆಕ್ಟರ್‌ರೊಬ್ಬರು ರೈತ ಸಂಘದ ತಾಲೂಕು ಅಧ್ಯಕ್ಷನನ್ನು ಏಕವಚನದಲ್ಲಿ ನಿಂದಿಸಿ ಧಮ್ಕಿ ಹಾಕಿರುವುದನ್ನು ಖಂಡಿಸಿ ಗುರುವಾರ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.


ಠಾಣೆಯ ಮುಂಭಾಗ ನೆರೆದಿದ್ದ ಸುಮಾರು 50ಕ್ಕೂ ಹೆಚ್ಚು ರೈತರು ಸಬ್ ಇನ್‌ಸ್ಪೆಕ್ಟರ್ ಈಶ್ವರ್ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಅನ್ಯ ವ್ಯಕ್ತಿಯೊಬ್ಬ ದೂರು ನೀಡಿದ್ದರು. ಹಾಗಾಗಿ ಮಹಿಳೆಗೆ ನ್ಯಾಯ ಕೊಡಿಸುವ ಸಲುವಾಗಿ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ದೂರು ಕೊಡಿಸಿದ್ದರು. ಆದರೆ ಈ ಸಂಬಂಧ ಎಸ್‌ಐ ಈಶ್ವರ್ ಅಮ್ಜಾದ್ ಖಾನ್ ಅವರನ್ನು ಏಕವಚನದಲ್ಲಿ ನಿಂದಿಸಿ ಧಮ್ಕಿ ಹಾಕಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ರಾಮಾಪುರ ಪೊಲೀಸ್ ಠಾಣೆ ಜನಸ್ನೇಹಿ ಠಾಣೆಯಾಗಿದೆ. ಈವರೆಗೂ ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಎಸ್‌ಐ ಈಶ್ವರ್ ರೈತರ ಬಗ್ಗೆ ಹಗುರ ಧೋರಣೆ ತೋರಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಿ ಇವರನ್ನು ಬೇರೆಡೆಗೆ ವರ್ಗಾಯಿಸಬೇಕು. ಸ್ಥಳಕ್ಕೆ ಎಸ್ಪಿ ಅವರು ಆಗಮಿಸಬೇಕು ಎಂದು ಒತ್ತಾಯಿಸಿದರು.


ಸುದ್ದಿ ತಿಳಿದು ಇನ್‌ಸ್ಪೆಕ್ಟರ್ ಶಶಿಕುಮಾರ್ ಸ್ಥಳಕ್ಕಾಗಮಿಸಿ, ಈ ಸಂಬಂಧ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ವಿಚಾರಣೆ ನಡೆಸಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳುಹಿಸದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈ ಬಿಟ್ಟರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಪೂಂಗುಡಿ, ರೈತ ಮುಖಂಡರಾದ ರಾಜಣ್ಣ, ಅರ್ಪುದರಾಜ್, ಬಸವರಾಜು ಹಾಗೂ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net