

ಮಂಡ್ಯ: ರಾಜ್ಯಸರ್ಕಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಜಿಲ್ಲೆಯಲ್ಲಿ ಮಂಗಳವಾರವೂ ಪ್ರತಿಭಟನೆ ನಡೆಯಿತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತ.ನಾಡು ಸ್ನೇಹಕ್ಕಾಗಿ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ರೈತರ ಹಿತವನ್ನು ಬದಿಗೊತ್ತಿ ಎಂದು ಆರೋಪಿಸಿ ಹೋರಾಟಕ್ಕೆ ಬೀದಿಗಿಳಿದ ರೈತ ಸಂಘ(ಮೂಲ ಸಂಘಟನೆ) ಸೇರಿದಂತೆ ಹಲವು ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ರೈತ ವಿರೋಧಿ ರಾಜ್ಯಸರ್ಕಾರದ ನಿಲುವನ್ನು ಖಂಡಿಸಿ ತಾಲೂಕಿನ ಇಂಡುವಾಳು ಸಮೀಪ ಹೆದ್ದಾರಿ ಸಂಚಾರ ತಡೆಗೆ ಮುಂದಾದ ರೈತ ಸಂಘ(ಮೂಲ ಸಂಘಟನೆ )ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಂಜೇಶ್‌ಗೌಡ, ಸೊ.ಶಿ.ಪ್ರಕಾಶ್, ಬನ್ನೂರು ನಾರಾಯಣ, ಸಿದ್ದೇಗೌಡ, ಇಂಡುವಾಳು ಬಸವರಾಜ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಕೆರೆ ಚಳವಳಿ ರಮೇಶ್‌ಗೌಡ, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್ ಸೇರಿ ನೂರಾರು ರೈತರನ್ನು ಪೊಲೀಸರು ಬಂಧಿಸಿ ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಇಂಡುವಾಳು ಗ್ರಾಮದ ಶಾಲಾ ಆವರಣದಿಂದ ಮೆರವಣಿಗೆ ಹೊರಟು ಸರ್ವಿಸ್ ರಸ್ತೆಯಲ್ಲಿ ಸಾಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರು ಮತ್ತು ಸಂಸದರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಬೆಂ-ಮೈ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
ಇದೇ ಸಂದರ್ಭದಲ್ಲಿ ಘೋಷಣೆ ಮೊಳಗಿಸುತ್ತ ರೈತರು ಎಕ್ಸ್‌ಪ್ರೆಸ್ ಹೈವೆಗೆ ನುಗ್ಗಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ-ನೂಕಾಟ ಉಂಟಾಗಿ ಕೊನೆಗೆ ರೈತರನ್ನು ಬಲಪ್ರಯೋಗಿಸಿ ಬಂಧಿಸಿದರು.