ಅನ್ನದಾತರು ಇಲ್ಲದಿದ್ದರೆ ಅನ್ನ ಸಿಗದು: ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತಾಕ್ರೋಶ

Farmers protest against Minister Sivananda Patil mandya
Published on

ಮಂಡ್ಯ: ರಾಜ್ಯದ ರೈತರು ಪರಿಹಾರದ ಹಣಕ್ಕಾಗಿ ಬರ ಬರಲೆಂದು ಕಾಯುತ್ತಾರೆ ಎಂಬುವ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಶಿವಾನಂದ ಪಾಟೀಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಇದೇ ಮೊದಲ ಬಾರಿಗೆ ರೈತರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಈ ಹಿಂದೆ ಹಲವು ಬಾರಿ ಅವಮಾನಿಸಿದ್ದಾರೆ. ಅನ್ನದಾತರು ಇಲ್ಲದಿದ್ದರೆ ಅನ್ನ ಸಿಗದು, ಗಂಜಿ ಇಲ್ಲದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬರಗಾಲದ ಸಂಕಷ್ಟದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ರಾಜ್ಯ ಸರ್ಕಾರ, ಸಚಿವರು ಕೀಳು ಮನೋಭಾವ ಪ್ರದರ್ಶಿಸುತ್ತಿದ್ದಾರೆ. ಅಧಿಕಾರದ ಮದದಿಂದ ತಲೆ ನಿಲ್ಲುತ್ತಿಲ್ಲ. ಮಾತ್ರವಲ್ಲದೆ ಕಾಂಗ್ರೆಸ್ ಸರ್ಕಾರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಕೃಷಿ ಸಮ್ಮಾನ್ ಯೋಜನೆಯ ಹಣ ನೀಡುತ್ತಿಲ್ಲ. ರೈತರ ಮಕ್ಕಳ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಲಾಗಿದೆ. ಈ ಮೂಲಕ ರೈತ ಸಮುದಾಯವನ್ನು ಕಡೆಗಣಿಸಿ ನೂರೆಂಟು ಭಾಗ್ಯ ನೀಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಮುಖಂಡರಾದ ವಡ್ಡರಹಳ್ಳಿ ಕೊಪ್ಪಲು ಚಂದ್ರಶೇಖರ್, ಬಾಣಸವಾಡಿ ಪ್ರಸನ್ನ, ಮಾದರಹಳ್ಳಿ ನಾಗರಾಜು, ಪಂಚಲಿಂಗು, ಹೆಮ್ಮಿಗೆ ಚಂದ್ರಶೇಖರ್, ಕೊತ್ತತ್ತಿ ಬ್ಯಾಂಕ್ ಸಿದ್ದೇಗೌಡ, ಮಾರಗೌಡನಹಳ್ಳಿ ಪಾಪಣ್ಣ, ಸಂಪಳ್ಳಿ ಶಿವಶಂಕರ್, ಕನ್ನಲಿ ಜಗದೀಶ್, ಹುಲಿವಾನ ಬಾಲರಾಜು, ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net