ಲೋಡ್‌ಶೆಡ್ಡಿಂಗ್ ವಿರುದ್ಧ ಸಿಡಿದೆದ್ದ ರೈತರು

MLK PRATHIBATANE 11
Published on

ಮೊಳಕಾಲ್ಮೂರು: ಲೋಡ್‌ಶೆಡ್ಡಿಂಗ್‌ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಕ್ಷೇತ್ರಕ್ಕೆ ಗುಣಮಟ್ಟ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರೈತಸಂಘದ ಪದಾಧಿಕಾರಿಗಳು ಪಟ್ಟಣದ ಬೆಸ್ಕಾಂ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಪ್ರಕೃತಿ ಕೃಷಿಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರವೇ ಚಿತ್ರದುರ್ಗ ಜಿಲ್ಲೆ ಸೇರಿ ರಾಜ್ಯದ ಅನೇಕ ತಾಲೂಕುಗಳಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಈ ಮಧ್ಯೆ ಅಲ್ಪಸ್ವಲ್ಪ ಉಳಿದ ಬೆಳೆ ಉಳಿಸಿಕೊಳ್ಳಲು ಮುಂದಾಗಿರುವ ಕೃಷಿಕರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆತಂಕ ತಂದೊಡ್ಡಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಕೊಟ್ಟ ಭರವಸೆ ಈಡೇರಿಸಲು ಪರದಾಡುತ್ತಿದೆ. ಈ ಮಧ್ಯೆ ವಿದ್ಯುತ್ ಪೂರೈಕೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷೃ ವಹಿಸಿದೆ ಎಂದು ದೂರಿದರು.

ವಿದ್ಯುತ್ ಅಭಾವದಿಂದ ಬೆಳೆಗಳು ಒಣಗಿವೆ. ನೂರಾರು ಕೋಟಿ ರೂ. ಮೊತ್ತದ ಬೆಳೆ ನಷ್ಟ ಆಗಿದೆ. ತೋಟದ ಮನೆಗಳಲ್ಲಿ ಕತ್ತಲ್ಲಲ್ಲಿ ಬದುಕು ನಡೆಸುವಂತಾಗಿದೆ. ವಿಷಜಂತು, ಕಾಡು ಪ್ರಾಣಿಗಳ ಭೀತಿ ಎದರಾಗಿದೆ. ಮಕ್ಕಳ ಶಿಕ್ಷಣಕ್ಕೆ ತೀವ್ರ ಸಮಸ್ಯೆ ಆಗಿದೆ ಎಂದು ಅಳಲು ತೋಡಿಕೊಂಡರು.

ಸಮಪರ್ಕ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದಿದ್ದರೆ ಕೃಷಿಕರು ಭೂಮಿ ಮೇಲೆ ಹಾಕಿದ ಬಂಡವಾಳವನ್ನು ವಾಪಸ್ ಕೊಡಲು ಸರ್ಕಾರ ಮುಂದಾಗಬೇಕು. ಕೃಷಿ ಕ್ಷೇತ್ರದ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆಯೂ ಬರಗಾಲ ಆವರಿಸಿತ್ತು. ಆದರೆ, ಅಂದು ಹೊರರಾಜ್ಯದಿಂದ ವಿದ್ಯುತ್ ಖರೀದಿ ಮಾಡಿ ಕೃಷಿ ಕ್ಷೇತ್ರಕ್ಕೆ ಸಮಸ್ಯೆ ಆಗದ ರೀತಿ ಪೂರೈಕೆ ಮಾಡಲಾಗಿತ್ತು. ಆದರೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಹಾಪೂರ ಭರವಸೆಗಳ ಹೆಸರಲ್ಲಿ ರೈತರ ತುಟಿಗೆ ತುಪ್ಪ ಸವರುವ ಕೆಲಸವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಕೂಡಲೇ ಕೃಷಿ ಕ್ಷೇತ್ರದ ಬಲವರ್ಧನೆಗೆ ವಿಶೇಷ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಈರಬೊಮ್ಮಯ್ಯ, ಮಂಜುನಾಥ, ಚಂದ್ರಣ್ಣ, ಎಸ್.ಮೇಘನಾಥ, ಪಾಪಯ್ಯ, ತಿಪ್ಪೇಸ್ವಾಮಿ, ಬಡಯ್ಯ, ಅಂಜಿನಪ್ಪ, ಲಕ್ಷ್ಮೀಪತಿ, ಭೀಮಯ್ಯ, ನೀಲಕಂಠಪ್ಪ, ಕನಕ ಶಿವಮೂರ್ತಿ, ಕೃಷ್ಣಮೂರ್ತಿ, ಬಸವರಾಜ್, ಮಲ್ಲಿಕಾರ್ಜುನ ಶಿವಣ್ಣ ಇತರರಿದ್ದರು.

ಸರ್ಕಾರಕ್ಕೆ ಕಂಟ: ದೇಶಕೆ ಅನ್ನ ಕೊಡುವ ಕೃಷಿಕರ ಕುರಿತು ನಿರ್ಲಕ್ಷೃ ತೋರಿದ ಸರ್ಕಾರಗಳು ಅಧಿಕಾರ ಕಳೆದುಕೊಂಡ ನಿದರ್ಶನ ಬಹಳಷ್ಟು ಇದೆ. ಈಗಿನ ಸರ್ಕಾರಕ್ಕೆ ಆ ಎಚ್ಚರಿಕೆ ಇರಬೇಕು. ಗ್ಯಾರಂಟಿ ಯೋಜನೆಗಳ ಮೂಲಕ ದೇಶಕ್ಕೆ ಮಾದರಿ ಆಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೃಷಿಕರ ಪ್ರಗತಿಗೆ ಬದ್ಧತೆ ಪ್ರದರ್ಶಿಸದಿದ್ದರೆ ಸರ್ಕಾರಕ್ಕೆ ಕಂಟಕ ಖಚಿತ.-ಬೇಡರಡ್ಡಿಹಳ್ಳಿ ಬಸವರಡ್ಡಿ, ಉಪಾಧ್ಯಕ್ಷ, ರಾಜ್ಯ ರೈತಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net