

ತಾಳಿಕೋಟೆ: ತಾಲೂಕಿನ ಕೆಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸಮಯ ನಿಗದಿಪಡಿಸದೆ ಪದೇ ಪದೆ ಲೋಡ್ ಶೆಡ್ಡಿಂಗ್ ಮಾಡುವುದನ್ನು ಖಂಡಿಸಿ ವಿವಿಧ ಗ್ರಾಮಗಳ ನೂರಾರು ರೈತರು ತಾಳಿಕೋಟೆ ಕೆಪಿಟಿಸಿಎಲ್ ಶಾಖೆ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ನಾವದಗಿ, ಲಕ್ಕುಂಡಿ, ಬ್ಯಾಲ್ಯಾಳ, ಶಳ್ಳಗಿ, ಕಾರನೂರ, ಕೊಡಗಾನೂರ, ಗುಂಡಕನಾಳ, ಬ.ಸಾಲವಾಡಗಿ, ಬಂಡೆಪ್ಪನಹಳ್ಳಿ, ಗ್ರಾಮಗಳಿಗೆ ತಾಳಿಕೋಟೆ 110 ಕೆವಿ ವಿದ್ಯುತ್ ಘಟಕದಿಂದ ರಾತ್ರಿ 3 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ವಿದ್ಯುತ್ ಪೂರೈಸಲಾಗುತ್ತದೆ. ಇದರ ನಡುವೆ ಪದೇ ಪದೆ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದಿಂದ ನೂರಾರು ರೈತರ ಪಂಪ್‌ಸೆಟ್‌ಗಳು ಸುಟ್ಟಿವೆ ಎಂದು ಆರೋಪಿಸಿದರು.
ರೈತರು ಕೆಪಿಟಿಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಪಿಎಸ್‌ಐ ರಾಮನಗೌಡ ಸಂಕನಾಳ ಸಂಧಾನ ನಡೆಸಿ ಎರಡು ದಿನದಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಮಾಡುವುದಾಗಿ ಧರಣಿ ನಿರತ ರೈತರನ್ನು ಸಮಾಧಾನ ಪಡಿಸಿದರು. ಎರಡು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದರೆ ಮತ್ತೆ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೇವೆಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ರುದ್ರಸ್ವಾಮಿ ಗಣಾಚಾರಿ, ಭೀಮನಗೌಡ ಸಲಗುಂದಿ, ಚಿನ್ನಪ್ಪ ಮುಡಲಗೇರಿ, ಭೀಮನಗೌಡ ವಣಕ್ಯಾಳ, ರಾಜುಗೌಡ ಸಂಕನಾಳ, ಶರಣಗೌಡ ಬಲಕಲ್ಲ, ಸಂಗಣ್ಣ ದೇಸಾಯಿ, ಬಾಪು ಇಬ್ರಾಹಿಂಪುರ, ನಿಂಗಣ್ಣ ಬಡಿಗೇರ, ರಾಜುಗೌಡ ಮೇಟಿ, ಸಿದ್ದಯ್ಯ ಹಿರೇಮಠ, ಶಾಂತಗೌಡ ಬಿರಾದಾರ, ರಾಜು ಐನಾಪುರ, ಮಲ್ಲನಗೌಡ ಮೇಟಿ, ಚಂದ್ರಶೇಖರ ಪಾಟೀಲ, ಶರಣಗೌಡ ಬಿರಾದಾರ, ಶರಣಪ್ಪ ಮುರಾಳ, ಪ್ರಶಾಂತ ಹೇಳವರ, ಶಾಂತಗೌಡ ಗಬಸಾವಳಗಿ, ದಸ್ತಗೀರಸಾಬ ಕೆಂಭಾವಿ ಇತರರಿದ್ದರು.