ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ

17Tmk_MSand_Protest
Published on

ತುಮಕೂರು: ಎಂ-ಸ್ಯಾಂಡ್ ಕಂಪನಿಗೆ ಭೂಸ್ವಾಧೀನಕ್ಕೆ ಮುಂದಾಗಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತಂಗನಹಳ್ಳಿ ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕೆಐಎಡಿಬಿ ಕಚೇರಿ ಮುಂಭಾಗ ಸೋಮವಾರ ಕೋಳಾಲ ಜಿಪಂ ಸದಸ್ಯ ಜಿ.ಆರ್.ಶಿವರಾಮಯ್ಯ ನೇತೃತ್ವದಲ್ಲಿ ಪ್ರತಿಭಟಿಸಿದ ನೂರಾರು ಗ್ರಾಮಸ್ಥರು, ರೈತರು ಗ್ರಾಮದ ವಿವಿಧ ಸರ್ವೇ ನಂಬರ್ ಜಮೀನುಗಳಲ್ಲಿ ಎಂ-ಸ್ಯಾಂಡ್ ಉತ್ಪಾದನೆಗೆ ಅವಕಾಶ ನೀಡಿದರೆ ಪರಿಸರದ ಜತೆಗೆ ಜನ, ಜಾನುವಾರುಗಳಿಗೆ ತೀವ್ರ ತೊಂದರೆ ಉಂಟಾಗಲಿದೆ. ಪರಿಸರಕ್ಕೆ ಮಾರಕವಾಗಿರುವ ಎಂ-ಸ್ಯಾಂಡ್ ಉತ್ಪಾದನೆಗೆ ಅನುಮತಿ ನೀಡದಂತೆ ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ಜಿ.ಆರ್.ಶಿವರಾಮಯ್ಯ, ತಂಗನಹಳ್ಳಿ ಸರ್ವೇ ನಂಬರ್ 14/1ಎ, 16/2, 17/1, 17/5, 18/1, 45, 56, 56/2 ಹಾಗೂ 58 ಸರ್ವೇ ನಂಬರ್‌ಗಳಲ್ಲಿ ಮೆ. ಬಿ.ಕೆ.ಜಿ.ಎಂ ಸ್ಯಾಂಡ್ ಪ್ರೈ.ಲಿ ಕಂಪನಿಗೆ ನೀಡಲು ಭೂ ಸ್ವಾಧಿನ ಮಾಡಿಕೊಳ್ಳಲು ಮುಂದಾಗಿದ್ದು, ಸ್ಥಳದಿಂದ 100 ಮೀಟರ್ ಅಂತರದಲ್ಲಿಯೇ ಶಾಲೆ, ದೇವಾಲಯ, ಗ್ರಾಮಗಳಿವೆ. ಅಲ್ಲದೆ ಎತ್ತಿನಹೊಳೆ ಬಫರ್ ಡ್ಯಾಂ ಸಹ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ಎಂ-ಸ್ಯಾಂಡ್ ಕಂಪನಿಗೆ ನೀಡಿದರೆ ಜನ, ಜಾನುವಾರುಗಳಿಗೆ ತೊಂದರೆಯಾಗಲಿದೆ. ಹಾಗಾಗಿ, ಭೂಸ್ವಾಧೀನವನ್ನು ಕೈ ಬಿಡುವಂತೆ ಕೆಐಎಡಿಬಿ ಅಧಿಕಾರಿಗಳು ಒತ್ತಾಯಿಸಿದರು.

ಎಂ.ಸ್ಯಾಂಡ್ ಕಂಪನಿ ಸ್ಥಾಪಿಸುವ ಮೊದಲು ಈ ಯೋಜನೆಯಿಂದ ಜನಸಾಮಾನ್ಯರಿಗೆ ಆಗುವ ನಷ್ಟಗಳ ಕುರಿತು ಸಾಮಾಜಿಕ ವರದಿ ತಯಾರಿಸಿ, ಸಾಧಕ, ಭಾದಕಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಬೇಕು. ಗ್ರಾಮಪಂಚಾಯಿತಿ ಒಪ್ಪಿಗೆ ಪಡೆದು, ನಂತರ ಭೂ ಸ್ವಾಧೀನಕ್ಕೆ ಕೈ ಹಾಕಬೇಕು. ಪರಿಸರಕ್ಕೆ ಹಾನಿಯಾಗು ವಂತಹ ಕೈಗಾರಿಕೆ ಸ್ಥಾಪಿಸಲು ಹೊರಟಿರುವುದು ದುರದೃಷ್ಟಕರ. ಕೂಡಲೇ ಇದನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಕೆ.ಎಸ್.ಗಂಗಾಧರಗೌಡ, ಆರ್. ಕಾಮರಾಜು, ಶಭೀರ್‌ಬಾಷಾ, ಯು.ಲಕ್ಷ್ಮೀಕಾಂತಯ್ಯ, ಕಾಳೇಗೌಡ, ರಂಗಹನುಮಯ್ಯ, ಬೋಪಣ್ಣ ನೇತೃತ್ವವಹಿಸಿದ್ದರು.

ಭೂಸ್ವಾಧೀನಾಧಿಕಾರಿಗೆ ಮನವಿ : ಎಂ-ಸ್ಯಾಂಡ್ ಕಂಪನಿಗೆ ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ಕೈಬಿಡಬೇಕು. ಪರಿಸರಕ್ಕೆ ಮಾರಕವಾಗಿರುವ ಎಂ-ಸ್ಯಾಂಡ್ ಘಟಕ ಸ್ಥಾಪನೆಗೆ ಅನುಮತಿ ನೀಡದಂತೆ ಪ್ರತಿಭಟನಾಕಾರರು ಕೆಐಎಡಿಬಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ವಿಶೇಷ ಭೂಸ್ವಾಧೀನಾಧಿಕಾರಿ ನಾಗಹನುಮಯ್ಯ, ಸರ್ಕಾರ ಒಂದು ಉದ್ದೇಶಕ್ಕಾಗಿ ಪ್ರಥಮ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ರೈತರಿಂದ ಆಕ್ಷೇಪಣೆ ಸಲ್ಲಿಸಲು ಕೋರಿದೆ. ಅದರಂತೆ ಕ್ರಷರ್‌ಗೆ ಭೂ ಸ್ವಾಧೀನಕ್ಕೆ ಅನುಮತಿ ನೀಡದಂತೆ ಮನವಿಯನ್ನು ಸಲ್ಲಿಸಿದ್ದೀರಿ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆಯಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net