ಹೆದ್ದಾರಿ ಕಾಮಗಾರಿ ತಡೆದು ರೈತರ ಪ್ರತಿಭಟನೆ

27 cn halli 1- salakatte gate protest
Published on

ಚಿಕ್ಕನಾಯಕನಹಳ್ಳಿ: ಭೂ ಸ್ವಾಧೀನ ಮಾಡಿಕೊಳ್ಳದೆ, ಪರಿಹಾರವನ್ನೂ ನೀಡದೆ ದೌರ್ಜನ್ಯದಿಂದ ಭೂಮಿ ವಶಕ್ಕೆ ಪಡೆದು ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಾಲ್ಕಟ್ಟೆ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ತಡೆದು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.


ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಸಾಲ್ಕಟ್ಟೆ ಗೇಟ್‌ನ ಸಿಮೆಂಟ್ ್ಯಾಕ್ಟರಿಯ ಸಮೀಪ ರಂಗಯ್ಯ ಅವರ ಸರ್ವೇ ನಂ 152ರ ಜಮೀನಿನಲ್ಲಿ ಕನಿಷ್ಠ ರೈತನ ಗಮನಕ್ಕೆ ತರದೆ ಹೆದ್ದಾರಿ ಕಾಮಗಾರಿ ಆರಂಭಿಸಿ ಗುಂಡಿ ತೋಡುತ್ತಿರುವುದನ್ನು ತಾಪಂ ಮಾಜಿ ಉಪಾಧ್ಯಕ್ಷ ತಿಮ್ಮಣ್ಣ ಪ್ರಶ್ನಿಸಿದರು. ಇದಕ್ಕೆ ಅಕ್ಕ ಪಕ್ಕದ ಜಮೀನಿನ ರೈತರು ಧ್ವನಿಗೂಡಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.


ರೈತರ ಯಾವ ಹೋರಾಟಕ್ಕೂ ಮಣಿಯದ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಿದರು. ಅಲ್ಲದೆ ಪೊಲೀಸರನ್ನು ಕರೆಸಿ ಬಂಧಿಸುತ್ತೇವೆ, ಇದು ಸರ್ಕಾರದ ಕೆಲಸ, ಯಾರು ಅಡ್ಡಿಮಾಡುವಂತಿಲ್ಲ. ಬೇಕಾದರೆ ಪರಿಹಾರ ಕೊಡುತ್ತೇವೆ. ಬಂದು ತೆಗೆದುಕೊಂಡು ಹೋಗಿ ಎಂದು ಬೆದರಿಸಿದರು. ಈ ಮಾತುಗಳಿಗೆ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ತೀವ್ರಗೊಳಿಸಿದರು. ಬಳಿಕ ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ್ ಆಗಮಿಸಿ ಸಂಧಾನ ಮಾಡಿದರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಇಲ್ಲಿ ಕೆಲಸ ಆರಂಭಿಸುವ ಪ್ರಯತ್ನ ನಡೆದಿತ್ತು.


ರೈತರ ಮೇಲೆ ದೌರ್ಜನ್ಯ: ಆರು ತಿಂಗಳಿನಿಂದ ಕಾಮಗಾರಿಗೆ ತಡೆ ಒಡ್ಡಲಾಗಿತ್ತು. ಒಬ್ಬಿಬ್ಬರು ರೈತರು ಪ್ರತಿಭಟನೆ ಮಾಡಿದರೆ ದೌರ್ಜನ್ಯ ನಡೆಸಿ ಪೊಲೀಸರ ಮೂಲಕ ಬಂಧಿಸುವ ಬೆದರಿಕೆ ಹಾಕಿ ಕಾಮಗಾರಿ ಮಾಡುತ್ತಾರೆ. ಹೆಚ್ಚಿನ ರೈತರು ಒಟ್ಟಾದರೆ ಕೆಲಸ ನಿಲ್ಲಿಸಿ ಪರಿಹಾರದ ಭರವಸೆ ಕೊಡುತ್ತಾರೆ. ಅಷ್ಟರ ಮಟ್ಟಿಗೆ ರೈತರ ಮೇಲೆ ದೌರ್ಜನ್ಯ ಮುಂದುವರಿದಿದೆ. ಆದರೆ ಭೂಮಿ ಕಳೆದುಕೊಂಡು ಬೀದಿಗೆ ಬರುವ ರೈತರ ಆತಂಕ ನೋವು ಆಡಳಿತ ಪ್ರಭುಗಳಿಗೆ ಕೇಳಿಸುತ್ತಿಲ್ಲ ಎಂದು ನೊಂದ ರೈತ ರಂಗಯ್ಯ ಅಲವತ್ತುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net