ಅರಣ್ಯಾಧಿಕಾರಿಗಳಿಗೆ ರೈತರ ತರಾಟೆ

25Rajesh1
Published on

ಚಾಮರಾಜನಗರ: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ದ್ವಂದ್ವ ಸೂಚನೆಗಳು ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಚೌಧರಿ ರಾತ್ರಿ ಅರಣ್ಯ ಪ್ರವೇಶ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯಪ್ರದೇಶದ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಅರಣ್ಯ ಇಲಾಖೆ, ಸಚಿವ ಈಶ್ವರ ಖಂಡ್ರೆ ವಿರುದ್ಧ ೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಬಳಿಕ ಬಿಆರ್‌ಟಿ ಕಚೇರಿ ಮುಂಭಾಗ ಕುಳಿತು ಧರಣಿ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಶ್ರೀಪತಿ ಅವರನ್ನು ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತರಾಟೆಗೆ ತೆಗೆದುಕೊಂಡರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರನ್ನು ಕಾನೂನು ಮೀರಿ ರಾತ್ರಿ ವೇಳೆ ಅರಣ್ಯ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಹೇಳಿದರು. ಇದಕ್ಕೆ ನಿರ್ದೇಶಕ ಶ್ರೀಪತಿ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಉತ್ತರಿಸಿದ್ದಕ್ಕೆ ಮರುಪ್ರಶ್ನಿಸಿದ ಭಾಗ್ಯರಾಜ್, ರಾತ್ರಿ 8 ಗಂಟೆ ನಂತರ ಕಾಡಿನೊಳಗೆ ಏಕೆ ಕಳುಹಿಸುತ್ತೀರಾ?, ಮಂತ್ರಿ ಸ್ಥಾನಮಾನಗಳು ನಮಗೆ ಬೇಕಾಗಿಲ್ಲ. ಅರಣ್ಯದೊಳಗೆ ಸಾಮಾನ್ಯ ಜನರನ್ನು ಕಳುಹಿಸಲು ಅವಕಾಶವಿದೆಯೇ? ಈ ವಿಚಾರದಲ್ಲಿ ಯಾರಿಂದ ಅಧಿಕಾರ ದುರ್ಬಳಕೆಯಾಗಿದೆ ಎಂದು ತಿಳಿಸಿ. ರಾತ್ರಿ ವೇಳೆ ಅರಣ್ಯದಲ್ಲಿ ಸಂಚರಿಸಲು ಅವಕಾಶ ಕೊಟ್ಟಿರುವುದರ ಲಿಖಿತ ಪತ್ರ ತೋರಿಸಿ ಎಂದು ಪಟ್ಟು ಹಿಡಿದರು. ರೈತರ ಪ್ರಶ್ನೆಗೆ ಉತ್ತರಿಸಲಾಗದ ನಿರ್ದೇಶಕ ಶ್ರೀಪತಿ ಕಚೇರಿಗೆ ತೆರಳಿದರು.

ಬಳಿಕ ರೈತರು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿದ್ದ ಸೂಚನೆ ಪತ್ರವನ್ನು ಸುಡಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಪತ್ರವನ್ನು ಹರಿದುಹಾಕಿದರು. ಬಂಡೀಪುರದ ಹುಲ್ಲುಗಾವಲಿನಲ್ಲಿ ಯಂತ್ರೋಪಕರಣ ಬಳಕೆ ಮಾಡಿ ಸ್ಥಳೀಯರ ಉದ್ಯೋಗ ಕಸಿಯಲಾಗಿದೆ. ಕಾಡು ಬೆಳೆಸಿ, ಉಳಿಸುತ್ತಿರುವವರು ರೈತರು. ರೈತರ ದನಗಳನ್ನು ಕಾಡಿನಲ್ಲಿ ಮೇಯಿಸಲು ಬಿಡುವುದಿಲ್ಲ ಎಂದು ಹೇಳಲು ಅರಣ್ಯ ಸಚಿವರಿಗೆ ನೈತಿಕತೆ ಇಲ್ಲ. ಈಗ ಸ್ಥಳೀಯರಿಗೆ ಅವಕಾಶ ನೀಡಲಾಗುವುದು. ಹೊರರಾಜ್ಯದ ಹಸುಗಳನ್ನು ಮೇಯಿಸಲು ನಿರ್ಬಂಧ ವಿಧಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳು ಇರುವುದು ನಿದ್ರೆ, ವಸೂಲಿ ಮಾಡಲು ಅಲ್ಲ. ಹೊರರಾಜ್ಯದಿಂದ ಹಸು ತಂದರೆ ತಡೆಯಲಿ. ಹೊರರಾಜ್ಯದ ಹಸುಗಳ ಹೆಸರಿನಲ್ಲಿ ಇಲ್ಲಿನ ರೈತರಿಗೆ ತೊಂದರೆ ಕೊಟ್ಟರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಶ್ರೀಪತಿ ಪ್ರತಿಭಟನಾ ಸ್ಥಳಕ್ಕೆ ಮರಳಿ ಬಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಜಿಲ್ಲಾ ಪ್ರವಾಸ ಪಟ್ಟಿಯನ್ನು ರೈತರಿಗೆ ಕೊಡಲು ಮುಂದಾದರು. ಇದನ್ನು ಅರಣ್ಯಾಧಿಕಾರಿಗಳಿಂದ ಓದಿಸಿದ ರೈತರು ಮರಳಿ ಪ್ರಶ್ನೆಗಳನ್ನು ಮಾಡಿದರು. ಅಂತಿಮವಾಗಿ ಕಾಡಿನಲ್ಲಿ ದನಗಳನ್ನು ಮೇಯಿಸಲು ರೈತರಿಗೆ ತೊಂದರೆ ಕೊಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಎಸ್.ರಾಜು, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಮಹೇಶ್, ದೇವಣ್ಣ, ಮಹೇಂದ್ರ, ಸತೀಶ್, ನಾಗೇಂದ್ರ, ಮಹೇಶ್, ಬಸವರಾಜ್, ನಾಗರಾಜು, ರಾಮಣ್ಣ, ನಾಗರಾಜಪ್ಪ, ರಾಜು, ಚೇತನ್‌ಕುಮಾರ್, ಶ್ರೀಕಂಠ, ರವಿ, ಚಿಕ್ಕಕಾಳಪ್ಪ, ಪ್ರಭುಸ್ವಾಮಿ, ಸಿದ್ದಲಿಂಗಪ್ಪ, ಮಹೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net