ಪರಿಹಾರ ತಾರತಮ್ಯ ವಿರೋಧಿಸಿ ರೈತರ ಪ್ರತಿಭಟನೆ

IMG-20250721-WA0108
Published on

ಅರಸೀಕೆರೆ: ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ಬೆಂಡೇಕೆರೆ ಗ್ರಾಮಸ್ಥರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಹೀಗಿದ್ದರೂ ಬಲವಂತವಾಗಿ ಜಮೀನು ಕಿತ್ತುಕೊಳ್ಳುವ ಹುನ್ನಾರ ನಡೆಸಿರುವುದು ಅಕ್ಷಮ್ಯ. ವೈಜ್ಞಾನಿಕ ದರ ನೀಡುವವರೆಗೂ ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ನಾಗೇನಹಳ್ಳಿ ದಯಾನಂದ ಮಾತನಾಡಿ, ಮೈಲನಹಳ್ಳಿ, ಕೊಪ್ಪಲು ಗ್ರಾಮದ ಹೊರ ವಲಯದಲ್ಲಿ ರೈತರ ಒಪ್ಪಿಗೆ ಪಡೆಯೆದೇ ಕೆಐಎಡಿಬಿ ವತಿಯಿಂದ ಕೈಗಾರಿಕಾ ವಲಯ ಸ್ಥಾಪನೆಗೆ ಜಮೀನು ಸಮತಟ್ಟು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಅಧಿಕಾರಿಗಳು ಉತ್ತರ ನೀಡಬೇಕಿದೆ. ಜಲಜೀವನ ಮಿಷನ್ ಕಾಮಗಾರಿ ಕಳಪೆಯಾಗಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಕೆ.ಎಚ್.ತಾರಾವತಿ, ಉಪಾಧ್ಯಕ್ಷೆ ಜ್ಯೋತಿ, ಚಿಕ್ಕಮಗಳೂರು ಘಟಕದ ಮಹಿಳಾ ಅಧ್ಯಕ್ಷೆ ಜಯಶೀಲಾ, ಪ್ರಧಾನ ಕಾರ್ಯದರ್ಶಿ ಅಶೋಕ್, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಮಂಡ್ಯ ಜಿಲ್ಲಾಧ್ಯಕ್ಷೆ ರೇಖಾ ರವೀಂದ್ರ ಇತರರು ಇದ್ದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net