

ಬಳ್ಳಾರಿ: ಮೆಣಸಿನಕಾಯಿ ಬೆಲೆ ಕುಸಿದಿದ್ದು, ಸರ್ಕಾರ ತಕ್ಷಣ ಮಾರುಕಟ್ಟೆ ಪ್ರವೇಶ ಮಾಡಿ ಬೆಲೆ ಕುಸಿಯದಂತೆ ತಡೆಯಬೇಕು ಹಾಗೂ ಶೈತ್ಯಾಗಾರಗಳಲ್ಲಿ ಮೆಣಸಿನಕಾಯಿ ಚೀಲಗಳಿಗೆ ಹೆಚ್ಚಿಸಿರುವ ಶುಲ್ಕ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ಎಐಕೆಕೆಎಂಎಸ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಮೆಣಸಿಕಾಯಿ ಬೆಳೆಯಲು ರೈತರು ಸಾಕಷ್ಟು ಖರ್ಚುಮಾಡಿದ್ದಾರೆ, ಬೀಜ-ರಸ ಗೊಬ್ಬರದ ಬೆಲೆ ಗಗನಕ್ಕೇರಿದ್ದಾಗಲೂ ಅಂಜದೆ ಕೈ ಸಾಲಮಾಡಿಕೊಂಡು ಬೆಳೆ ಬೆಳೆದಿದ್ದಾರೆ. ಈ ಬಾರಿ ಮಳೆ ಬಾರದಿದ್ದಾಗ, ಕಾಲುವೆ ನೀರುಸಿಗದಿದ್ದಾಗ, ಟ್ಯಾಂಕರ್ ನೀರಿನಿಂದ ಕಷ್ಟಪಟ್ಟು ಮೆಣಸಿನಕಾಯಿ ಜೋಪಾನ ಮಾಡಿದ್ದಾರೆ. ಆದರೆ, ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಕ್ಕಿದ್ದಾರೆ ಎಂದು ರೈತ ಮುಖಂಡರು ಅಲವತ್ತುಕೊಂಡರು.
ಮೆಣಸಿನಕಾಯಿಯ 5531 ತಳಿಗೆ 25 ಸಾವಿರ ರೂ. ಮತ್ತು ಬ್ಯಾಡಗಿ ತಳಿ 2043ಕ್ಕೆ 55 ಸಾವಿರ ರೂ.ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶೈತ್ಯಾಗಾರಗಳಲ್ಲಿ ಮೆಣಸಿನಕಾಯಿ ಚೀಲಗಳ ಶುಲ್ಕ ಹೆಚ್ಚಿಸಲಾಗಿದ್ದು, ರೈತರ ಆದಾಯದಲ್ಲಿ ಶೇ.1 ರಷ್ಟು ಕಮಿಷನ್ ಕೇಳಲಾಗುತ್ತಿದೆ. ನಿರ್ಧಾರ ಹಿಂತೆಗೆದುಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಎಐಕೆಕೆಎಂಎಸ್ ಮುಖಂಡರಾದ ಗೋವಿಂದು, ಈ. ಹನುಮಂತಪ್ಪ, ಗುರಳ್ಳಿ ರಾಜ, ಬಸಣ್ಣ , ಈರಣ್ಣ, ಕಾಸಿಂ ಸಾಬ್,ಲಿಂಗಪ್ಪ, ಬಸವರಾಜ್, ರಮೇಶ್, ಮಲ್ಲಿಕಾರ್ಜುನ, ಮಲ್ಲಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.