ಜಮೀನು ಹಿಂದಿರುಗಿಸಲು ಆಗ್ರಹಿಸಿ ಬಿಡಿಎ ವಿರುದ್ಧ ರೈತರ ಪ್ರತಿಭಟನೆ

bda protest
Published on

ಬೆಂಗಳೂರು: ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಕಾಲಮಿತಿಯೊಳಗೆ ಬಳಕೆ ಮಾಡಿಕೊಳ್ಳದ ಕಾರಣ ತಕ್ಷಣವೇ ಆ ಜಾಗವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ರೈತರು ಬಿಡಿಎ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಪಿಆರ್‌ಆರ್ ರೈತ ಹಾಗೂ ಸೈಟ್‌ದಾರರ ಸಂಘದ ನೇತೃತ್ವದಲ್ಲಿ ಕೃಷಿಕರು ಕುಮಾರಪಾರ್ಕ್‌ನಲ್ಲಿರುವ ಬಿಡಿಎ ಕಚೇರಿ ಎದಿರು ರೈತ ಸಮೂಹ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಯೋಜನೆ ಜಾರಿ ಮಾಡದಿದ್ದಲ್ಲಿ ನಮ್ಮ ಜಮೀನನ್ನು ವಾಪಸ್ ಮಾಡಿ. ಕ್ಯಾಬಿನೆಟ್ ಒಪ್ಪಿರುವ 2013ರ ಕಾಯ್ದೆ ಅನ್ವಯ ಪರಿಹಾರ ನೀಡದಿದ್ದರೆ ನಮ್ಮ ಜಮೀನಿಗೆ ಎನ್‌ಒಸಿ ಕೊಟ್ಟುಬಿಡಿ ಎಂದು ಬಿಡಿಎ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್, 18 ವರ್ಷಗಳ ಹಿಂದೆ ಘೋಷಿಸಿರುವ ಪಿಆರ್‌ಆರ್ ಯೋಜನೆಗೆ ಜಮೀನು ಬಿಟ್ಟುಕೊಟ್ಟಿರುವ ಯಾವೊಬ್ಬ ರೈತರಿಗೂ ಪರಿಹಾರ ನೀಡಿಲ್ಲ. ಇತ್ತೀಚಿಗೆ ಯೋಜನೆ ಹೆಸರನ್ನು ಬಿಬಿಸಿ ಎಂದು ಮರುನಾಮಾಂಕಿತ ಮಾಡಲಾಗಿದೆಯೇ ಹೊರತು, ಪರಿಹಾರದ ಬಗ್ಗೆ ಸ್ಪಷ್ಟ ತೀರ್ಮಾನ ಆಗಿಲ್ಲ. ಕಳೆದ ತಿಂಗಳು ಸಚಿವ ಸಂಪುಟದಲ್ಲಿ 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ವಿತರಿಸಲು ತೀರ್ಮಾನ ಕೈಗೊಳ್ಳಲಾಯಿತು. ಇದಾಗಿ ವಾರದಲ್ಲಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದರೂ, ಮತ್ತೆ ಕೆಲ ದಿನಗಳಲ್ಲೇ ಮರುಆದೇಶ ಹೊರಡಿಸಿ ಪರಿಹಾರದ ಮಾದರಿಯನ್ನೇ ಬದಲಾಯಿಸಲಾಗಿದೆ. ಸಂಪುಟದ ಗಮನಕ್ಕೆ ತಾರದೆ ಅಧಿಕಾರಿಯೊಬ್ಬರೇ ಪರಿಹಾರ ನಿಗದಿ ಮಾಡಬಹುದೇ ಎಂದು ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ರೈತರ ಜಮೀನನ್ನು ವಾಪಸ್​​ ಮಾಡಲು ಎನ್​​ಒಸಿ ವಿತರಿಸುವಂತೆ ಬಿಡಿಎಗೆ ನಿರ್ದೇಶಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ ಎಂದು ಶ್ರೀನಿವಾಸ್​​ ತಿಳಿಸಿದರು.

ಅಹವಾಲು ಆಲಿಸಿದ ಅಧಿಕಾರಿ ವರ್ಗ:

ಪ್ರತಿಭಟನೆ ನಡೆದ ಸ್ಥಳಕ್ಕೆ ಆಗಮಿಸಿದ ಬಿಡಿಎ ಅಧಿಕಾರಿಗಳು ರೈತರ ಅಹವಾಲನ್ನು ಆಲಿಸಿದರು. ನಗರಾಭಿವೃದ್ಧಿ ಇಲಾಖೆ ಆದೇಶದ ಮೇರೆಗೆ ಭೂಸ್ವಾಧೀನ ಹಾಗೂ ಪರಿಹಾರ ವಿತರಣೆಗಾಗಿ ಸಂಧಾನ ಪ್ರಕ್ರಿಯೆಗಾಗಿ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಇದನ್ನು ನಾವು ಏಕಾಏಕಿ ಮಾಡುತ್ತಿಲ್ಲ. ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದು, ಹಾಲಿ ಅಹವಾಲನ್ನು ಇಲಾಖೆ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿ ವಾಪಸಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net