ಬ್ಯಾಂಕ್‌ಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

13-pnp 1
Published on

ಪಾಂಡವಪುರ: ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಸುಸ್ತಿದಾರ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡುವ ಅಧಿಕಾರವನ್ನು ಖಾಸಗಿ ಏಜೆನ್ಸಿಯವರಿಗೆ ವಹಿಸಿರುವ ಕ್ರಮ ಖಂಡಿಸಿ ರೈತಸಂಘ ಕಾರ್ಯಕರ್ತರು ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹೆದ್ದಾರಿ ಸಂಚಾರ ತಡೆದು ಬಳಿಕ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸೋಮವಾರ ಪಟ್ಟಣದ ಐದು ದೀಪ ವೃತ್ತದಲ್ಲಿ ಟ್ರ್ಯಾಕ್ಟರ್‌ಗೊಂದಿಗೆ ಜಮಾವಣೆಗೊಂಡ ರೈತಸಂಘ ಕಾರ್ಯಕರ್ತರು ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದರು. ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮೆರವಣಿಗೆ ಮೂಲಕ ಪಿಎಲ್‌ಡಿ ಬ್ಯಾಂಕ್ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಬ್ಯಾಂಕಿನ ಆಡಳಿತ ಮಂಡಳಿಯ ಕ್ರಮ ಸರಿಯಲ್ಲ. ರೈತರು ವ್ಯವಸಾಯದ ಉದ್ದೇಶಕ್ಕಾಗಿ ಪಡೆದಿರುವ ಟ್ರ್ಯಾಕ್ಟರ್‌ಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ಜಪ್ತಿಗೆ ಮುಂದಾಗಿರುವುದು ಖಂಡನೀಯ. ತಕ್ಷಣ ಈ ರೀತಿಯ ವರ್ತನೆಯನ್ನು ನಿಲ್ಲಿಸಬೇಕು. ಟ್ರಾೃಕ್ಟರ್ ಸಾಲ ನೀಡಿ ಬಲವಂತವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.

ಇದಕ್ಕೆ ಉತ್ತರ ನೀಡಲು ಬ್ಯಾಂಕಿನ ಅಧ್ಯಕ್ಷರು ಮುಂದಾದಾಗ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ವ್ಯವಸ್ಥಾಪಕ ನಿರ್ದೇಶಕರು ಬರುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕಾಗಮಿಸಿದ ಬ್ಯಾಂಕ್ ನಿರ್ದೇಶಕಿ ಉಷಾ ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ ಅವರ ಜತೆ ಮಾತುಕತೆ ನಡೆಸಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘ ವಲಯಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಅಮೃತಿ ರಾಜಶೇಖರ್, ದಯಾನಂದ್, ಎಣ್ಣೆಹೊಳೆಕೊಪ್ಪಲು ಮಂಜು, ರಾಘು, ಸುಂಕಾತೊಣ್ಣೂರು ಮೋಹನ್, ಶಿವಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net