

ಮಂಡ್ಯ: ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬ್ಯಾಂಕ್ ಆಫ್ ಬರೋಡಾ ವಿರುದ್ಧ ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿಸಾನ್ ಸಮ್ಮಾನ್, ಹಾಲಿನ ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ನರೇಗಾ ಕೂಲಿ, ಅನ್ನಭಾಗ್ಯ, ಸಾಮಾಜಿಕ ಭದ್ರತಾ ಯೋಜನೆ ಹಣವನ್ನು ಬ್ಯಾಂಕ್ ಅಧಿಕಾರಿಗಳು ಬಾಕಿ ಇರುವ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಹಣವನ್ನು ಫಲಾನುಭವಿಗಳ ಖಾತೆಗೆ ಮರು ಜಮೆ ಮಾಡಬೇಕು. ಫಲಾನುಭವಿಗಳ ಒಪ್ಪಿಗೆ ಇಲ್ಲದೆ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.
ಅಡಮಾನ ಇರಿಸಿರುವ ಚಿನ್ನಾಭರಣ ಬಿಡಿಸಿಕೊಳ್ಳಲು ಸಾಲಗಾರರು ಹೋದಾಗ ಹಣ ಪಾವತಿಸಿದ ನಂತರ ಸಾಲ ಬಾಕಿ ಇರುವುದರಿಂದ ಸಾಲ ಮರುಪಾವತಿಸಿದ ಮೇಲೆ ಆಭರಣ ಕೊಡುವುದಾಗಿ ಹೇಳುತ್ತಿರುವ ಅಧಿಕಾರಿಗಳ ಧೋರಣೆ ಖಂಡನೀಯ. ಒಂದು ಸಾಲಕ್ಕೂ, ಮತ್ತೊಂದು ಸಾಲಕ್ಕೂ ಜೋಡಣೆ ಮಾಡದೆ ಸಾಲ ಮರುಪಾವತಿಸಿದವರಿಗೆ ಆಭರಣಗಳನ್ನು ನೀಡುವಂತೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು. ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿರುವ ಕಾರಣ ಯಾವುದೇ ತರಹದ ಸಾಲಗಳಿಗೆ ಬಡ್ಡಿ ಹಾಕುವುದನ್ನು ನಿಲ್ಲಿಸಬೇಕು. ಬಲವಂತದ ಸಾಲ ವಸೂಲಿ, ಹರಾಜು ಪ್ರಕ್ರಿಯೆ ಬ್ಯಾಂಕ್ ಶಾಖೆಗಳಲ್ಲಿ ಕಂಡುಬಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ, ವಿಜಯಕುಮಾರ್, ಪ್ರಸನ್ನ ಇತರರಿದ್ದರು.