ರಾಜ್ಯಾದ್ಯಂತ ರೈತರ ಪ್ರತಿಭಟನೆ 15ರಂದು

former
Published on

ಹುಬ್ಬಳ್ಳಿ: ಮಹದಾಯಿ ಮತ್ತು ಕೃಷ್ಣ ನದಿ ಯೋಜನೆ ಸಮರ್ಪಕವಾಗಿ ಜಾರಿ, ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ, ಎಂಎಸ್‌ಪಿ ಸಮರ್ಥವಾಗಿ ಅನುಷ್ಠಾನ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಆ. 15ರಂದು ವಿವಿಧ ರೈತ ಸಂಘಟನೆಗಳಿಂದ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ‌್ಯಾಲಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ಹೋರಾಟದ ಬೆಂಬಲಾರ್ಥವಾಗಿ ಟ್ರ್ಯಾಕ್ಟರ್ ರ‌್ಯಾಲಿ ನಡೆಯಲಿದೆ. ಅಂದು ಎಲ್ಲ ರೈತರು ಒಟ್ಟಾಗಿ ಆಯಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ನಡೆಸಿ, ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಿದ್ದಾರೆ ಎಂದರು.
ರಾಜ್ಯದಲ್ಲಿ ಕಳೆದ ವರ್ಷ ಬರಗಾಲದಿಂದ ರೈತರು ಸಂಕಷ್ಟ ಅನುಭವಿಸಿದರೂ ಬೆಳೆ ಹಾನಿ ಪರಿಹಾರ ನೀಡಿಲ್ಲ. ಅತಿವೃಷ್ಟಿಯಿಂದ ರಾಜ್ಯದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ತಡೆಗೆ ರೈತರು ಸೇರಿ ತಜ್ಞರ ಸಮಿತಿ ರಚಿಸಿ ಪರಿಹಾರ ಕಂಡಕೊಳ್ಳಬೇಕು ಎಂದರು.
ಕರ್ನಾಟಕ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವಂತೆ ಆದೇಶ ಹೊರಡಿಸಿದೆ. ಇದರ ಹಿಂದೆ ಮುಂದಿನ ದಿನಗಳಲ್ಲಿ ರೈತರಿಗೆ ಸರ್ಕಾರದ ಎಲ್ಲ ಸಬ್ಸಿಡಿ ಕಡಿತಗೊಳಿಸುವ ತಂತ್ರಗಾರಿಕೆ ಅಡಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ದೆಹಲಿಯ ಹೋರಾಟ ನಡೆಸುತ್ತಿರುವ ರೈತ ಮುಖಂಡರನ್ನು ಆಹ್ವಾನಿಸಲು ಗುರುವಾರ 8 ಜಿಲ್ಲೆಯ ರೈತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಹಸಿರು ಸೇನೆ ಅಧ್ಯಕ್ಷ ಕರಬಸಪ್ಪಗೌಡ, ದಯಾನಂದ ಪಾಟೀಲ, ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಮಹೇಶ ಬೆಳಗಾಂವಕರ, ಮಲ್ಲಣ್ಣ ಹಲೆಕರ, ಗುರುಸಿದ್ದಪ್ಪ ಕೋಟಗಿ, ಗುರು ರಾಯನಗೌಡ್ರ, ಪರಶುರಾವ ಎತ್ತಿನಗುಡ್ಡ, ಹುಳುವಪ್ಪ ಬಳಗೇರ, ಆತಹಳ್ಳಿ ದೇವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net