

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹಳ್ಳ ಹಿಡಿದಿದ್ದ ಜಿಲ್ಲೆಯ ರೇಷ್ಮೆ ಬೆಳೆಯಲ್ಲಿ ಚೇತರಿಕೆ ಕಂಡುಬಂದಿದೆ. ಮದುವೆ ಶುಭ ಸಮಾರಂಭಗಳು ಪುನರಾರಂಭಗೊಂಡಿರುವ ಬೆನ್ನಲ್ಲೆ ಜಿಲ್ಲಾ ರೇಷ್ಮೆ ಇಲಾಖೆ ಪರಿಚಯಿಸುತ್ತಿರುವ ‘ಜಿ ತಳಿ’ ಬೆಳೆಗೆ ರೈತರು ಉತ್ಸುಕತೆ ತೋರಿಸುತ್ತಿದ್ದಾರೆ.
ಜಿಲ್ಲೆಯ 7032 ಹೆಕ್ಟೇರ್‌ನಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. 6624 ರೈತರು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ದೇವನಹಳ್ಳಿ ರೇಷ್ಮೆ ಬೆಳೆಯಲ್ಲಿ ಮುಂದಿದ್ದು, ಎರಡನೇ ಸ್ಥಾನ ಹೊಸಕೋಟೆ ಇದೆ. ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳಲ್ಲೂ ರೇಷ್ಮೆ ಚಟುವಟಿಕೆ ಗರಿಗೆದರಿದೆ ಎಂದು ಜಿಲ್ಲಾ ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್ ತಿಳಿಸಿದ್ದಾರೆ.
ಗುಣಮಟ್ಟದ ರೇಷ್ಮೆ: ಅಂತಾರಾಷ್ಟ್ರೀಯ ಗುಣಮಟ್ಟವಿರುವ ಜಿ ತಳಿ ರೇಷ್ಮೆ ಬೆಳೆಯಲು ಇಲಾಖೆ ಬೆಳೆಗಾರರನ್ನು ಹುರಿದುಂಬಿಸುತ್ತಿದೆ. ಜಿಲ್ಲೆಯಲ್ಲಿ ಮಿಶ್ರತಳಿ ರೇಷ್ಮೆ ಹೆಚ್ಚೆಚ್ಚು ಬೆಳೆಯುತ್ತಿದ್ದು, ಲಾಭದ ದೃಷ್ಟಿಯಿಂದ ಹಾಗೂ ನಿರ್ವಹಣೆ ಹಿನ್ನೆಲೆಯಲ್ಲಿ ದುಬಾರಿ ಎನಿಸಿದೆ ಇದಕ್ಕೆ ಹೋಲಿಸಿದರೆ ಜಿ ತಳಿ ರೇಷ್ಮೆ ಬೆಳೆಗಾರರಿಗೆ ವರದಾನವಾಗಲಿದೆ ಎಂಬುದು ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.
ಪ್ರೋತ್ಸಾಹಧನ: ರೇಷ್ಮೆ ಬೆಳೆ ಉತ್ತೇಜಿಸುವ ಸಲುವಾಗಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಿಶ್ರತಳಿಗೆ ಕೆಜಿಗೆ 30 ರೂ. ಹಾಗೂ ಜಿ ತಳಿಗೆ ಕೆಜಿಗೆ 50 ರೂ. ಪ್ರೋತ್ಸಾಹಧನ ಸೇರಿ ಸಹಾಯಧನವಾಗಿ 100 ಮೊಟ್ಟೆಗೆ 1 ಸಾವಿರ ರೂಪಾಯಿಯಂತೆ ರೇಷ್ಮೆ ಬೆಳೆಗಾರರ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇದು ಕರೊನಾ ಲಾಕ್‌ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ರೈತರಿಗೆ ತುಸು ನಿರಾಳತೆ ಮೂಡಿಸಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೊಂದೇ ವಿಜಯಪುರ ಮಾರುಕಟ್ಟೆ: ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ಪ್ರಸ್ತುತ ರೇಷ್ಮೆ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ ಹೊಸಕೋಟೆಯ ಎಚ್ ಕ್ರಾಸ್‌ನಲ್ಲಿ ಸಣ್ಣ ಮಟ್ಟದ ಮಾರುಕಟ್ಟೆ ನಡೆಯುತ್ತಿದೆ. ಇಲ್ಲಿನ ಬೆಳೆಗಾರರು ಶಿಡ್ಲಘಟ್ಟ ಹಾಗೂ ರಾಮನಗರ ರೇಷ್ಮೆ ಮಾರುಕಟ್ಟೆಗಳಿಗೆ ಹೆಚ್ಚು ರೇಷ್ಮೆ ಸರಬರಾಜು ಮಾಡುತ್ತಿದ್ದಾರೆ.
ನೂರರಿಂದ ಸಾವಿರಕ್ಕೆ: ಈ ಮೊದಲು ತಾಲೂಕುವಾರು ನೂರರಿಂದ ಇನ್ನೂರು ಕೆಜಿಯಷ್ಟು ರೇಷ್ಮೆ ಉತ್ಪಾದನೆಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆರೇಳು ಸಾವಿರ ಕೆಜಿಯಷ್ಟು ಉತ್ಪಾದನೆ ಕಂಡುಬರುತ್ತಿದೆ. ಜಿಲ್ಲೆಯ ರೇಷ್ಮೆಗೆ ಉತ್ತಮ ಮಾರುಕಟ್ಟೆ ಇರುವುದರಿಂದ ಜಿಲ್ಲಾ ರೇಷ್ಮೆ ಬೆಳೆಗಾರರು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಉತ್ಸುಕತೆ ತೋರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬ ನಿರ್ವಹಣೆ: ರೇಷ್ಮೆ ಬೆಳೆಗೆ ಕುಟುಂಬ ನಿರ್ವಹಣೆಯೇ ಸಾಕಾಗುತ್ತದೆ, ಇದಕ್ಕೆ ಕೂಲಿ ಕಾರ್ಮಿಕರ ಅವಶ್ಯಕತೆ ಇಲ್ಲ. ಕುಟುಂಬವೊಂದರಲ್ಲಿ ಪತಿ ಪತ್ನಿಯೇ ಸೇರಿ ನೂರರಿಂದ ಇನ್ನೂರು ಮೊಟ್ಟೆಗಳನ್ನು ಸಾಕಬಹುದು ಎಂಬುದು ಇಲಾಖೆ ಅಭಿಪ್ರಾಯವಾಗಿದೆ.
ಲಾಕ್‌ಡೌನ್ ತೆರವು ಬಳಿಕ ಶುಭ ಸಮಾರಂಭಗಳು ಪುನಾರಂಭಗೊಂಡಿದ್ದು, ರೇಷ್ಮೆ ಉತ್ಪಾದನೆಯಲ್ಲೂ ಪ್ರಗತಿ ಕಂಡುಬರುತ್ತಿದೆ. ಮುಖ್ಯವಾಗಿ ಜಿ ತಳಿ ಪರಿಚಯಿಸಿರುವುದರಿಂದ ಜಿಲ್ಲೆಯ ರೇಷ್ಮೆ ಬೆಳೆಗಾರರು ಆಸಕ್ತಿ ತೋರಿಸುತ್ತಿದ್ದಾರೆ. ರೇಷ್ಮೆ ಉತ್ಪಾದನೆಗೆ ಸಂಬಂಧಿಸಿದಂತೆ ರೇಷ್ಮೆ ಇಲಾಖೆ ಎಲ್ಲ ತರಬೇತಿ, ಸಲಹೆ, ಮಾರ್ಗದರ್ಶನ ನೀಡುತ್ತಿದೆ. ಪ್ರಭಾಕರ್, ಉಪನಿರ್ದೇಶಕ ರೇಷ್ಮೆ ಇಲಾಖೆ ಬೆಂ.ಗ್ರಾಮಾಂತರ ಕರೊನಾ ಕಾರಣದಿಂದ ಶುಭಸಮಾರಂಭಗಳು ನಿಂತಿಹೋಗಿದ್ದು, ರೇಷ್ಮೆ ಸೀರೆ, ಪಂಚೆ, ಶಲ್ಯಗಳ ಮಾರಾಟವೂ ಸ್ಥಗಿತಗೊಂಡಿತ್ತು. ಆ ವೇಳೆ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಪ್ರಸ್ತುತ ಸಹಜ ಸ್ಥಿತಿಗೆ ಮರಳಿದ್ದು, ರೇಷ್ಮೆಗೂ ಉತ್ತಮ ಮಾರುಕಟ್ಟೆ ಸಿಗುತ್ತಿದೆ. ರವಿಕುಮಾರ್, ರೇಷ್ಮೆ ಬೆಳೆಗಾರ ದೇವನಹಳ್ಳಿ