

ಹುಬ್ಬಳ್ಳಿ: ಹೈದ್ರಾಬಾದನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಕೃಷಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪಕ್ಷಾತಿತ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎಂ. ಹಣಸಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಬೆಳೆಗಳನ್ನು ಖರೀದಿಸಬೇಕು. ಇಡೀ ವರ್ಷ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳು ತೆರೆದಿರಬೇಕು. ಸಲು ಮಾರಾಟ ಮಾಡಿದ ದಿನವೇ ಹಣ ನೀಡಬೇಕು ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ನಿಯಮಗಳನ್ನು ಪರಿಷ್ಕರಿಸಿ ರೈತರ ಜಮೀನಿನಲ್ಲಿ ಕಳೆ ತೆಗೆಯುವುದು, ಬದು ನಿರ್ಮಾಣ, ಸ್ವಚ್ಛತಾ ಕಾರ್ಯ, ರಸ್ತೆ ದುರಸ್ತಿ ಇತ್ಯಾದಿ ಕೆಲಸಕ್ಕೆ ಅವಕಾಶ ನೀಡಬೇಕು. ಫಸಲ್ ಬೀಮಾ ಯೋಜನೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಬದಲು ಸರ್ಕಾರಿ ಸಂಸ್ಥೆಗಳಿಗೆ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆ ವಿಷಯವನ್ನು ಮುನ್ನೆಲೆಗೆ ತಂದು ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿ.ಎಂ. ಮುದಿಗೌಡರ ಮಾತನಾಡಿ, ರೈತರ ಬೆಳೆಗೆ ಸೂಕ್ತ ಬೆಲೆ ನೀಡಬೇಕು. ಒಂದು ವೇಳೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಆಯಾ ಸಲಿಗೆ ನಿಗದಿಯಾಗಿರುವ ಕನಿಷ್ಠ ಬೆಂಬಲ ಬೆಲೆಗೆ ತಕ್ಕಂತೆ ವ್ಯತ್ಯಾಸದ ಹಣವನ್ನು ರೈತರ ಖಾತೆಗೆ ಹಾಕಬೇಕು ಎಂದು ಮನವಿ ಮಾಡಿದರು.
ಅಕಾಲಿಕ ಮಳೆಯಿಂದ ಶೇ. 60ರಷ್ಟು ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರ ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಎಸ್.ಬಿ. ಬಳಿಗಾರ, ಮಾಗನೂರ, ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ ಗೋಷ್ಠಿಯಲ್ಲಿದ್ದರು.