

ವಿಟ್ಲ: ಕೃಷಿಗೆ ಬರುವ ಕಾಡುಪ್ರಾಣಿಗಳ ತೊಂದರೆ ಹಾಗೂ ವೈಯಕ್ತಿಕವಾಗಿ ವ್ಯಕ್ತಿಗೆ ಕೂಡಾ ರಕ್ಷಣೆಯನ್ನು ಪಡೆಯುವ ನಿಟ್ಟಿನಲ್ಲಿ ಕೋವಿಯ ಪರವಾನಿಗೆಯನ್ನು ನೀಡಲಾಗಿದೆ. ಅದನ್ನು ಮೂರು ತಿಂಗಳು ಠಾಣೆಯಲ್ಲಿ ಇಟ್ಟಾಗ ರೈತರಿಗಾಗುವ ನಷ್ಠವನ್ನು ಅಧಿಕಾರಿ ವರ್ಗವೇ ಭರಿಸಬೇಕು. ನಮಗೆ ಕೋವಿ ಉಪಯೋಗಕ್ಕಿಲ್ಲದಂತೆ ಮಾಡುವ ಧೋರಣೆ ಸರಿಯಲ್ಲ. ಚುನಾವಣೆಯಿಂದ ರೈತರಿಗೆ ಸಂಕಷ್ಟ ಬಂದಿದ್ದು, ಕೃಷಿಕರ ಜೀವನ ದುಸ್ತರವಾಗಿದೆ. ಆದುದರಿಂದ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘದ ಅಧ್ಯಕ್ಷ ಮುರುವ ಮಹಾಬಲ ಭಟ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ಜಿಲ್ಲಾಡಳಿತಕ್ಕೆ ರೈತರ ಸಮಸ್ಯೆ ಇದುವರೆಗೆ ಅರ್ಥವಾಗಿಲ್ಲ. ರೈತ ಬೆಳಗ್ಗಿನಿಂದ ದುಡಿದರೆ ಮಾತ್ರ ಊಟ ಎಂಬುದು ತಿಳಿದಿಲ್ಲ. ಅಧಿಕಾರಿಗಳು ಕೃಷಿಕರ ತೆರಿಗೆ ಹಣದಿಂದ ವೇತನ ಪಡೆಯುತ್ತಿದ್ದು, ನಮ್ಮ ರಕ್ಷಣೆಯಾಗಿ ಇಟ್ಟುಕೊಂಡ ಸೇವಕರಾಗಿದ್ದಾರೆ. ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಾ ಬಂದಿದ್ದು, ಪೊಲೀಸ್ ಠಾಣೆಯನ್ನೂ ಖಾಸಗೀಕರಣ ಮಾಡಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಏಪ್ರಿಲ್ ೧ರ ಅನಂತರ ಕೋವಿ ಇಡಬೇಕೆಂದು ಜಿಲ್ಲಾಡಳಿತ ತಿಳಿಸಿದ್ದರೂ, ಪೊಲೀಸ್ ಠಾಣೆಯಲ್ಲಿ ಮಾ.೨೦ರೊಳಗೇ ತಂದಿಡಬೇಕೆಂದು ಪರವಾನಿಗೆ ಕೋವಿಯನ್ನು ತಕ್ಷಣ ತರುವಂತೆ ರೈತರಿಗೆ ಕಿರುಕುಳ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಲಕ್ಷಾಂತರ ಮೌಲ್ಯದ ಕೃಷಿ ಉತ್ಪನ್ನಗಳನ್ನು ಮನೆಯಲ್ಲಿ ಶೇಖರಿಸಿಡುವ ರೈತರಿಗೆ ಭದ್ರತೆ ಇಲ್ಲದಂತಾಗಿದೆ. ಜಿಲ್ಲೆಯ ಪ್ರಭಾವಿ ವ್ಯಕ್ತಿಗಳಿಗೆ ಠೇವಣಾತಿಯಿಂದ ವಿನಾಯಿತಿ ನೀಡಿದ್ದಾರೆ. ರೈತರಿಗೆ ಈ ವಿನಾಯಿತಿ ಯಾಕೆ ಇಲ್ಲ. ಕಾಡು ಪ್ರಾಣಿ ಬಂದಾಗ ರೈತರು ಕರೆದಾಗ ಪೊಲೀಸರು ಆಗಮಿಸಿ ಸೂಕ್ತ ರಕ್ಷಣೆಯನ್ನು ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಸರಿಯಾದ ಸೂಚನೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಎನ್.ಕೆ.ಇದಿನಬ್ಬ ಸಜಿಪಮುನ್ನೂರು ಮಾತನಾಡಿ ವರ್ಷಕ್ಕೆ ೨, ೩ ಬಾರಿ ಚುನಾವಣೆ ಬರುತ್ತಿದ್ದು, ಆಗ ಪರವಾನಿಗೆ ಹೊಂದಿರುವ ಕೋವಿಯನ್ನು ಪೊಲೀಸ್‌ಠಾಣೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ಸಮಯಕ್ಕೆ ಮೊದಲೇ ಕೋವಿ ಠೇವಣಿ ಇಡುವಂತೆ ದಿನಕ್ಕೆ ಮೂರು ನಾಲ್ಕು ಸಲ ಕರೆಯನ್ನು ಮಾಡಿ ಕಿರುಕುಳ ನೀಡಿ ಬೆದರಿಕೆಯನ್ನು ಹಾಕಿದ್ದಾರೆ. ರೈತರು ಕೃಷಿಗೆ ನೀರು ಹಾಯಿಸಲು ರಾತ್ರಿ ಸಮಯವೂ ತೋಟಕ್ಕೆ ಹೋಗಬೇಕಾಗಿದ್ದು, ಪಂಪ್ ಸೆಡ್ ರೈತ ಮನೆಯಂಗಳದಲ್ಲಿರುವುದಿಲ್ಲ. ಮನೆಯಲ್ಲಿ ಒಬ್ಬನೇ ಇದ್ದು, ತೋಟದಲ್ಲಿ ಹೋಗುವ ಸಂದರ್ಭದಲ್ಲಿ ರಕ್ಷಣೆಗೆ ಕೋವಿಯ ಅಗತ್ಯವಿದೆ. ತೋಟದಿಂದ ಪಂಪ್ ಕಳವಾಗಿರುವ ಬಗ್ಗೆ ದೂರು ಕೊಟ್ಟರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಹೇಳಿದರು.
ಸದಸ್ಯರಾದ ಪಿ.ಶಿವಚಂದ್ರ ಪಡುವನ್ನೂರು, ವಿನೋದ್ ಶೆಟ್ಟಿ ಪಡುವನ್ನೂರು, ಜಯಪ್ರಕಾಶ ರೈ ನೂಜಿಬಲು ಉಪಸ್ಥಿತರಿದ್ದರು.