80ರಷ್ಟು ರೈತರು ವಿಮೆ ಪರಿಹಾರದಿಂದ ವಂಚಿತ,ಶಿರಗುಪ್ಪಿ ಹೋಬಳಿ ರೈತರ ಹೋರಾಟದ ಎಚ್ಚರಿಕೆ

IMG_20230712_112835_112-2.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 2022ರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಸಂರ್ಪೂಣ ಬೆಳೆ ಹಾನಿಯಾಗಿದ್ದರೂ ಶೇ. 80ರಷ್ಟು ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಪರಿಹಾರ ಬಂದಿಲ್ಲ, ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿ ಸಮರ್ಪಕ ವರದಿ ಕೊಡದೇ ಇರುವುದೇ ಇದಕ್ಕೆ ಕಾರಣ ಎಂದು ಶಿರಗುಪ್ಪಿ ಹೋಬಳಿ ರೈತರು ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ, ಕಳೆದ ವರ್ಷ ಅತಿವೃಷ್ಟಿಯಿಂದ ಬಹುತೇಕ ಬೆಳೆ ಹಾಳಾಗಿದೆ. ಆದರೆ, ಕೃಷಿ ಅಧಿಕಾರಿಗಳು ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ. ವಿಮಾ ಕಂಪನಿಗಳು ತಪ್ಪು ವರದಿ ಆಧರಿಸಿ ಅತ್ಯಂತ ಕಡಿಮೆ ರೈತರಿಗೆ ಪರಿಹಾರ ನೀಡಿವೆ. ಇದರಿಂದ ಬಹುಸಂಖ್ಯೆಯಲ್ಲಿ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದರು.

ಹುಬ್ಬಳ್ಳಿ ಶಹರ ಭಾಗದಲ್ಲಿ ಕೃಷಿ ಭೂಮಿ ಕಡಿಮೆ ಇರುವಲ್ಲಿ ಹೆಚ್ಚು ಪರಿಹಾರ ನೀಡಿದ್ದಾರೆ. ಶಿರಗುಪ್ಪಿ ಸೇರಿ ವಿವಿಧ ಹೋಬಳಿಗಳಲ್ಲಿ ಹೆಚ್ಚು ಬೆಳೆ ನಾಶವಾದರೂ ಪರಿಹಾರ ನೀಡಿಲ್ಲ. ಅಧಿಕಾರಿಗಳು ವ್ಯವಸ್ಥಿತವಾಗಿ ವಿಮಾ ಕಂಪನಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಪ್ರಕೃತಿ ವಿಕೋಪ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೂ, ಬೆಳೆವಿಮೆಗೆ ನೂರೆಂಟು ಷರತ್ತುಗಳನ್ನು ವಿಧಿಸಿ ಪರಿಹಾರ ಸಿಗದಂತೆ ಮಾಡಿದ್ದಾರೆ. ಈ ತಾರತಮ್ಯ ಶ್ರೀ ಸರಿಪಡಿಸಬೇಕು. ಎಲ್ಲ ರೈತರಿಗೂ ಶ್ರೀ ಪರಿಹಾರ ನೀಡಬೇಕು. ಇಲ್ಲದಿದ್ದರೆ ಜುಲೈ ಅಂತ್ಯದ ವೇಳೆಗೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ರೈತ ಮುಖಂಡರಾದ ರುನಾಥ ಕೆಂಪಲಿಂಗನಗೌಡರ, ಸುಭಾಸ ಬೂದಿಹಾಳ, ದತ್ತಾತ್ರೇಯ ಪಾಟೀಲ, ಪ್ರಕಾಶ ಹನುಮರಡ್ಡಿ, ಇತರರು ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಎನ್.ಎಚ್. ಕೋನರೆಡ್ಡಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕೂಡಲೇ ವಿಮಾ ಕಂಪನಿಗಳ ಜತೆ ಮಾತುಕತೆ ನಡೆಸಬೇಕು. ಸದನದಲ್ಲಿ ಬೆಳೆವಿಮೆ ಕುರಿತು ಚರ್ಚೆ ನಡೆಸಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net