ಹುಬ್ಬಳ್ಳಿ: ಸಾಲಗಾರ ರೈತರ ಬೆಳೆವಿಮೆ ಪ್ರಿಮಿಯಂ ಪಾವತಿಸದೇ ಕರ್ತವ್ಯಲೋಪ ಎಸಗಿದ್ದ ಬ್ಯಾಂಕ್ವೊಂದಕ್ಕೆ ಧಾರವಾಡ ಜಿಲ್ಲಾ ಗ್ರಾಹಕ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿದೆ.
2017&18ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಸಲ್ ಬೀಮಾ ಯೋಜನೆಯಡಿ ರೈತರು ಬೆಳೆವಿಮೆ ಪ್ರಿಮಿಯಂ ಪಾವತಿಸಬೇಕಾಗಿತ್ತು. ಆಯಾ ಬ್ಯಾಂಕ್ಗಳಲ್ಲಿ ಬೆಳೆಸಾಲ ಪಡೆದ ರೈತರ ವಿಮೆ ಪ್ರಿಮಿಯಂ ಹಣವನ್ನು ಕಂಪನಿಗಳಿಗೆ ಬ್ಯಾಂಕಿನವರೇ ಪಾವತಿಸಿ ಸಾಲದ ಹಣಕ್ಕೆ ಜಮಾ ಮಾಡುವುದು ವಾಡಿಕೆ.
ಆದರೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಕೆಲ ಸಾಲಗಾರ ರೈತರ ಪ್ರಿಮಿಯಂ ಹಣವನ್ನು ಪಾವತಿಸದೇ ಅಲ್ಲಿನ ಬ್ಯಾಂಕೊಂದು ಕರ್ತವ್ಯಲೋಪ ಎಸಗಿತ್ತು.
ಇದರ ವಿರುದ್ಧ ಅಲ್ಲಿನ ರೈತರಾದ ಸಂಜೀವ ಪಾಟೀಲ, ದತ್ತಾತ್ರೇಯ ಪಾಟೀಲ ಹಾಗೂ ಗೋವಿಂದಗೌಡ ಪಾಟೀಲ ಎನ್ನುವವರು ಹಲವು ಸಲ ಬ್ಯಾಂಕ್ಗೆ ತೆರಳಿ ತಮಗೆ ಆದ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದರು. ಗ್ರಾಮದ ರೈತ ಮುಖಂಡರಾದ ಸುಭಾಸ ಬೂದಿಹಾಳ, ಎಸ್.ಎಂ. ಗುಂಜಾಳ ಹಾಗೂ ಇತರರು ಸಹ ಬ್ಯಾಂಕಿಗೆ ಹೋಗಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಬ್ಯಾಂಕಿನವರು ಕೇಳಿರಲಿಲ್ಲ. ಇದರಿಂದ ಬೇಸತ್ತ ರೈತರು ಧಾರವಾಡ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ನ್ಯಾಯಾಲಯವು ವಾದ ಪ್ರತಿವಾದ ಆಲಿಸಿ ರೈತರಿಗೆ ಬರಬೇಕಾಗಿದ್ದ ಬೆಳೆವಿಮೆ ಹಣ ಪಾವತಿಸುವಂತೆ ಆದೇಶ ಮಾಡಿದೆ. ಅಲ್ಲದೇ ಇಲ್ಲಿಯವರೆಗೆ ರೈತರಿಗೆ ಆದ ತೊಂದರೆ, ಮಾನಸಿಕ ಕಿರಿಕಿರಿಗೂ ಪರಿಹಾರ ನೀಡುವಂತೆ ಸೂಚಿಸಿದೆ.
ನ್ಯಾಯಾಲಯದ ಆದೇಶದಂತೆ ಸಂಜೀವ ಪಾಟೀಲ, ದತ್ತಾತ್ರೇಯ ಪಾಟೀಲರಿಗೆ 2.50 ಲಕ್ಷ ರೂ. ಬೆಳೆವಿಮೆ ಹಾಗೂ 50 ಸಾವಿರ ರೂ. ಪರಿಹಾರ ನೀಡಬೇಕಾಗಿದೆ. ಗೋವಿಂದಗೌಡ ಪಾಟೀಲ ಅವರಿಗೆ 3.50 ಲಕ್ಷ ಒಟ್ಟು ಪರಿಹಾರ ನೀಡಬೇಕಾಗಿದೆ.
ಅಜಿರ್ದಾರರ ಪರ ವಕೀಲ ಎಸ್.ಐ. ಅಮ್ಮಿನಬಾವಿ ವಾದ ಮಂಡಿಸಿದ್ದರು.