ರೈತರ ಅಹೋರಾತ್ರಿ ಧರಣಿ ಅಂತ್ಯ

ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಹಳ್ಳ ಸಮೀಪ ಪ್ರತಿಭಟನಾನಿರತ ರೈತರನ್ನು ಗಣೇಶ್ ಪ್ರಸಾದ್ ಭೇಟಿ ಮಾಡಿ ಮಾತನಾಡಿದರು. ಜವರೇಗೌಡ, ಅಭಿಷೇಕ್ ಗುಡಿಮನೆ, ಸಂಪತ್ತು, ವೀರಪ್ಪ, ಪರಶಿವಮೂರ್ತಿ, ವಿಶ್ವಾಸ್ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಹಳ್ಳ ಸಮೀಪ ಪ್ರತಿಭಟನಾನಿರತ ರೈತರನ್ನು ಗಣೇಶ್ ಪ್ರಸಾದ್ ಭೇಟಿ ಮಾಡಿ ಮಾತನಾಡಿದರು. ಜವರೇಗೌಡ, ಅಭಿಷೇಕ್ ಗುಡಿಮನೆ, ಸಂಪತ್ತು, ವೀರಪ್ಪ, ಪರಶಿವಮೂರ್ತಿ, ವಿಶ್ವಾಸ್ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ಕಲ್ಲುಕಟ್ಟೆ ಜಲಾಶಯ ಹಾಗೂ ನಲ್ಲೂರು ಅಮಾನಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಕಲ್ಲುಕಟ್ಟೆಹಳ್ಳ ಸಮೀಪ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಅಕಾರಿಗಳೊಂದಿಗೆ ಭೇಟಿ ಮಾಡಿ ಅಹವಾಲು ಆಲಿಸಿದ ನಂತರ ಪ್ರತಿಭಟನೆ ಅಂತ್ಯವಾಯಿತು.

ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಭೇಟಿ ನೀಡದಿರುವ ಕುರಿತು ರೈತರು ಶಾಸಕರನ್ನು ಪ್ರಶ್ನಿಸಿದರು. ರೈತ ಮುಖಂಡ ಕುಂದಕೆರೆ ಸಂಪತ್ತು ಮಾತನಾಡಿ, ಇತ್ತೀಚೆಗೆ ಹೆಚ್ಚಾಗಿ ಮಳೆಯೂ ಬೀಳುತ್ತಿಲ್ಲ. ಅಲ್ಲದೆ ನೀವು ಶಾಸಕರಾಗಿ ಆಯ್ಕೆಯಾದ ನಂತರ ಕೆರೆಗಳನ್ನು ತುಂಬಿಸಲು ಆಸಕ್ತಿ ತೋರಿಸುತ್ತಿಲ್ಲ. ವಡ್ಡಗೆರೆ ಕೆರೆಯಿಂದ ನೀರು ಮುಂದಿನ ಕೆರೆಗಳಿಗೆ ಹೋಗುವ ಮೊದಲೇ ನೀರು ಬಿಡುವುದನ್ನು ನಿಲ್ಲಿಸಲಾಗುತ್ತಿದೆ. ನೀವು ಅಕಾರಿಗಳ ಮಾತು ನಂಬಿ ಅವರು ಹೇಳಿದಂತೆ ಕೇಳುತ್ತಿದ್ದೀರಿ ಎಂದು ಆಕ್ಷೇಪಿಸಿದರು.

ಇದರಿಂದ ಕುಪಿತರಾದ ಗಣೇಶ್ ಪ್ರಸಾದ್, ನಾನು ಕ್ಷೇತ್ರದ ಅಭಿವೃದ್ದಿಗೆ ಕೆಲಸ ಮಾಡುತ್ತಿದ್ದು, ನನ್ನ ಬಗ್ಗೆ ನಿಮಗೆ ನಂಬಿಕೆಯಿಲ್ಲದಿದ್ದರೆ ವಾಪಸ್ ಹೋಗುತ್ತೇನೆಂದು ಅಲ್ಲಿಂದ ಕಾರಿನತ್ತ ಹೋಗಲು ಮುಂದಾದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ಮಹೇಶ್ ಮತ್ತು ಕೊಡಸೋಗೆ ಶಿವಪ್ರಸಾದ್ ನಡುವೆ ಕೈಕೈ ಮಿಲಾಯಿಸುವ ಪರಿಸ್ಥಿತಿಯೂ ನಿರ್ಮಾಣವಾಯಿತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸ್ಥಳದಲ್ಲಿದ್ದ ಮುಖಂಡರು ಕೆರೆಗಳನ್ನು ತುಂಬಿಸುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದು ಮನವೊಲಿಸಿ ಗಣೇಶ್ ಪ್ರಸಾದ್ ಅವರನ್ನು ವಾಪಸ್ ಕರೆತಂದರು.

ಮುಖಂಡ ಗುಡಿಮನೆ ಅಭಿಷೇಕ್ ಮಾತನಾಡಿ, ಅಂತರ್ಜಲ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳಲಾಗಿದೆ. ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾರೂ ಇತ್ತ ತಲೆಹಾಕಿಲ್ಲ. ಅಕಾರಿಗಳ ನಿರ್ಲಕ್ಷ್ಯ ಹಾಗೂ ದಾರಿತಪ್ಪಿಸಿದ್ದರಿಂದ ಕೆರೆಗಳಿಗೆ ನೀರು ಹರಿಸದೆ ರೈತಾಪಿ ವರ್ಗ ತೊಂದರೆಗೊಳಗಾಗಿದೆ. ಈ ಬಗ್ಗೆ ತಾವು ಅಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಗಣೇಶ್‌ಪ್ರಸಾದ್ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಅಕಾರಿಗಳ ಮಾತನ್ನು ನಂಬದೆ ನಾನು ಖುದ್ದಾಗಿ ಕೆರೆಹಳ್ಳಿ ಪಂಪ್‌ಹೌಸ್‌ಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಮೂರು ಮೋಟಾರ್‌ಗಳು ಕೆಟ್ಟಿರುವುದರಿಂದ ಅವುಗಳ ರಿಪೇರಿ ಕಾರ್ ನಡೆಯುತ್ತಿದೆ. ನವೆಂಬರ್ ತಿಂಗಳು ಪೂರ್ತಿ ರಿಪೇರಿಗೆ ಬೇಕಾಗಿದೆ. ಮೋಟಾರ್‌ಗಳು ಸರಿಯಾದ ಕೂಡಲೇ ಡಿಸೆಂಬರ್ ವೇಳೆಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು. ಅಕಸ್ಮಾತ್ ಸಾಧ್ಯವಾಗದಿದ್ದಲ್ಲಿ ನಿಮ್ಮ ಪ್ರತಿಭಟನೆಗೆ ಬೆಂಬಲ ನಿಡುತ್ತೇನೆ ಎಂದು ಮನವರಿಕೆ ಮಾಡಿದ ನಂತರ ಆಹೋರಾತ್ರಿ ಧರಣಿಯನ್ನು ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net