ಡಿವೈಎಸ್ಪಿ ವರದಿಗೆ ರೈತರ ಆಕ್ರೋಶ

HLY KABBU
Published on

ಹಳಿಯಾಳ: ತಾಲೂಕಿನ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಹೊರಗೆ ಡಿಜಿಟಲ್ ತೂಕದ ಯಂತ್ರ ಅಳವಡಿಸುವ ಸ್ಥಳ ಪರಿಶೀಲನೆ ವರದಿಯಲ್ಲಿ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ರೈತರ ಆಶಯಕ್ಕೆ ವಿರುದ್ಧವಾಗಿ ಜಿಲ್ಲಾಡಳಿತಕ್ಕೆ ವರದಿ ನೀಡಿರುವುದಕ್ಕೆ ಹಳಿಯಾಳ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಹಳಿಯಾಳ, ಧಾರವಾಡ, ಕಲಘಟಗಿ, ಅಳ್ನಾವರ ಭಾಗದ ರೈತರು ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಮರಾಠಾ ಭವನದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಭಾನುವಾರ ಕರೆದಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.

ಹಿರಿಯ ರೈತ ಮುಖಂಡ ನಾಗೇಂದ್ರ ಜಿವೋಜಿ ಮಾತನಾಡಿ, ಜು. 21ರಂದು ನಡೆದಿದ್ದ ಕಬ್ಬು ಬೆಳೆಗಾರರ ಸಂಘ, ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಸಕ್ಕರೆ ಕಾರ್ಖಾನೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಡಿವೈಎಸ್ಪಿ ಅವರು ನಿರ್ಣಯಗಳನ್ನು ಮತ್ತು ಸ್ಥಳ ಪರಿಶೀಲನೆ ವೇಳೆಯಲ್ಲೂ ಭಾಗವಹಿಸಿ ಎಲ್ಲರ ಸಹಮತಿಯೊಂದಿಗೆ ಗುರುತಿಸಿದ್ದ ಸ್ಥಳವನ್ನು ಎಲ್ಲರ ಮುಂದೆ ಒಪ್ಪಿ ವರದಿಯಲ್ಲಿ ಹೇಳಿಕೆ ದಾಖಲಿಸುವಾಗ ಸಂಚಾರ ವ್ಯವಸ್ಥೆಯ ಕಾರಣ ನೀಡಿ ವರದಿ ನೀಡಿದ್ದು, ಇಲ್ಲಿ ಕಾಣದ ಕೈಗಳಿಗೆ ಆಸರೆಯಾಗಿರುವುದು ಎದ್ದು ಕಾಣುತ್ತಿದೆ ಎಂದು ದೂರಿದರು.

ರೈತರ ವಿರೋಧಿಯಾಗಿ ಆಡಳಿತಗಾರರ ಕೈಗೊಂಬೆಯಂತೆ ವರ್ತಿಸಿದ ಅಧಿಕಾರಿಯ ನಡೆಯ ಮೇಲೆ ಆಕ್ಷೇಪವಿದ್ದು, ಮಾಡಿರುವ ತಪ್ಪನ್ನು ಕೂಡಲೇ ತಿದ್ದಿಕೊಂಡು ರೈತರ ಕ್ಷಮೆ ಕೇಳಬೇಕು ಮತ್ತು 15 ದಿನಗಳ ಒಳಗಾಗಿ ಡಿಜಿಟಲ್ ತೂಕದ ಯಂತ್ರವನ್ನು ರೈತರ ನಿಯೋಗ ಗುರುತಿಸಿದ್ದ ಸ್ಥಳದಲ್ಲಿಯೇ ನಿರ್ವಿುಸಬೇಕು. ಇಲ್ಲದಿದ್ದಲ್ಲಿ ಕಬ್ಬು ಬೆಳೆಗಾರರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಪರವಾಗಿ ಬೃಹತ್ ಹೋರಾಟ ನಡೆಸುವ ಖಡಕ್ ಎಚ್ಚರಿಕೆ ನೀಡಿದರು.

ಕಬ್ಬು ಕಟಾವು ಮತ್ತು ಸಾಗಾಣಿಕೆಯ ವೆಚ್ಚದ ಕಡಿತದಲ್ಲೂ ರೈತರಿಗೆ ಮಾಡಿರುವ ವ್ಯತ್ಯಾಸವನ್ನು ಲೆಕ್ಕ ಪರಿಶೀಲನೆ ವರದಿಯಲ್ಲಿ ಕಂಡು ಹಿಡಿದು ಸಕ್ಕರೆ ಆಯುಕ್ತರು ಪ್ರತಿ ಟನ್ ಕಬ್ಬಿಗೆ 265 ರೂ. ಗಳಂತೆ ಹಿಂದಿರುಗಿಸಲು ಆದೇಶ ನೀಡಿದರು ಸಹಿತ ಕಾರ್ಖಾನೆಯ ಆಡಳಿತ ಮಂಡಳಿಯವರು ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಎರಡು ವಾರ ತಡೆಯಾಜ್ಞೆ ನೀಡಲಾಗಿತ್ತು ಆದರೆ, ಪ್ರಸ್ತುತ ತಡೆಯಾಜ್ಞೆ ತೆರವುಗೊಂಡಾದ ಮೇಲೂ ಇದುವರೆಗೆ ಬಾಕಿ ಹಣ ನೀಡದೆ ಇರುವುದು ಪ್ಯಾರಿಯ ರೈತ ವಿರೋಧಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದವಾಗಬೇಕು ಎಂದರು.

ಕಬ್ಬು ಬೆಳೆಗಾರರ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟಿ ಮಾತನಾಡಿ, ರೈತರ ಕಡೆಗಣನೆ ನಿಜಕ್ಕೂ ಆಘಾತಕಾರಿಯಾಗಿದೆ. ಕೂಲಿಕಾರ್ವಿುಕರ ವೇತನ, ರಾಸಾಯನಿಕ ಗೊಬ್ಬರಗಳ ದರ ಏರಿಕೆಯಿಂದಾಗಿ ರೈತರು ಕಂಗೆಟ್ಟಿದ್ದಾರೆ. ಅಲ್ಲದೆ, ರೈತ ಸ್ನೇಹಿ ಸರ್ಕಾರ ಎನ್ನುತ್ತ ರೈತರ ಅವಶ್ಯಕ ಬೇಡಿಕೆಗಳಿಗೆ ತಣ್ಣೀರೆರಚುವ ಕೆಲಸ ಅಧಿಕಾರಿ ವರ್ಗದವರಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಕಬ್ಬು ಬೆಳೆಗಾರರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಮಹೇಶ ಬೆಳಗಾಂವಕರ ಹಾಗೂ ಉಪಾಧ್ಯಕ್ಷ ಉಳವಪ್ಪ ಬಳಿಗೇರ ಮಾತನಾಡಿ, ನಿಗದಿತ ಸಮಯಕ್ಕಿಂತ ಮುಂಚೆಯೇ ಕಬ್ಬು ಕಟಾವಿಗೆ ಯಾವುದೇ ರೀತಿಯಿಂದ ಒತ್ತಾಯಿಸದೆ ಮತ್ತು ರೈತರಿಗೆ ಪುಸಲಾಯಿಸಿ ಸಹಿ ಮಾಡಿಸಿಕೊಂಡು ಕಾರ್ಖಾನೆ ಪ್ರಾರಂಭ ಮಾಡುವ ಸಂಚನ್ನು ಕಾರ್ಖಾನೆ ರೂಪಿಸಿದರೆ ಈ ಬಾರಿ ದೊಡ್ಡ ಪ್ರಮಾಣದಲ್ಲೇ ಕ್ರಾಂತಿಕಾರಿ ಹೋರಾಟವನ್ನು ಕಾರ್ಖಾನೆ ಎದುರಿಸಲಿದೆ ಎಂದರು.

ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ಪ್ರಮುಖರಾದ ಅಶೋಕ ಮೇಟಿ, ಪ್ರಕಾಶ ಫಾಕ್ರಿ, ಗಿರಿಶ ಟೋಸೂರ ಮಾತನಾಡಿ, ಕಾಡು ಪ್ರಾಣಿಗಳಿಂದ ರೈತರ ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿದ್ದು, ಈ ಬಗ್ಗೆಯೂ ನಮ್ಮ ಹೋರಾಟ ನಡೆಯಲಿದೆ ಎಂದು ಘೊಷಿಸಿದರು.

ಧಾರವಾಡ ಜಿಲ್ಲೆಯ ರೈತ ಮುಖಂಡರುಗಳು, ಕಲಘಟಗಿ ತಾಲೂಕು, ಅಳ್ನಾವರ ತಾಲೂಕು, ದಾಂಡೇಲಿ ತಾಲೂಕಿನ ರೈತ ಮುಖಂಡರುಗಳ ಜತೆ ಪರಶುರಾಮ ಯತ್ತಿನಗುಡ್ಡ, ವಾಸು ಡಾಕಪ್ಪನವರ, ಭರತೇಶ ಪಾಟೀಲ, ಸುರೇಶ ಶಿವಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net