

ನಾಯಕನಹಟ್ಟಿ: ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿನಿತ್ಯ 7 ಗಂಟೆ ವಿದ್ಯುತ್ ಪೂರೈಕೆ ಬದಲಾಗಿ ಕೇವಲ 4 ಗಂಟೆ ಮಾತ್ರ ಸರಬರಾಜು ಮಾಡುತ್ತಿರುವ ಬೆಸ್ಕಾಂ ನಡೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ನಾಯಕನಹಟ್ಟಿ, ತಳಕು ಬೆಸ್ಕಾಂ ಎದುರು ಭಾನುವಾರ ಮುಷ್ಕರ ನಡೆಸಿದ ಕೃಷಿಕರು, ಬರ ಎದುರಿಸುತ್ತಿರುವ ರೈತರಿಗೆ ಬೆಸ್ಕಾಂನ ಈ ಪವರ್ ಕಟ್‌ನಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ದಿನಗಳಿಂದ ಪ್ರತಿನಿತ್ಯ 4 ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದ್ದು, ರೈತರು ತಮ್ಮ ಬೆಳೆಗಳಿಗೆ ನೀರು ಹರಿಸಲು ಹರಸಾಹಸ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಇದೇ ರೀತಿ ವಿದ್ಯುತ್ ವ್ಯತ್ಯಯ ನೀತಿ ಅನುಸರಿಸಿದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಮನವಿ ಆಲಿಸಿದ ತಳಕು ಬೆಸ್ಕಾಂ ಎಇಇ ತಿಮ್ಮರಾಜು ಮಾತನಾಡಿ, ಬೆಸ್ಕಾಂನ ಎಎಲ್‌ಡಿಸಿ ಸೂಚನೆ ಮೇರೆಗೆ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 4 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕೊರತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಮಸ್ಯೆಗೆ ಪರಿಹಾರ: ವಿದ್ಯುತ್ ಕೊರತೆ ತಾತ್ಕಾಲಿಕ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಜಲಾಶಯಗಳು ತುಂಬಿಲ್ಲ. ಹೀಗಾಗಿ ನೆರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಪ್ರಯತ್ನಗಳು ನಡೆದಿವೆ. ವಿದ್ಯುತ್ ಖರೀದಿಯ ನಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು.-ಎನ್.ವೈ.ಗೋಪಾಲಕೃಷ್ಣ, ಶಾಸಕ