

ಬಾಗಲಕೋಟೆ: ನವನಗರ ಯೂನಿಟ್-3 ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದ ಕಂಪನಿ ಬೆಳೆ ನಾಶ ಮಾಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಭೂಸ್ವಾಧೀನ ಪಡಿಸಿಕೊಂಡು ಜಮೀನಿಗೆ ಯೋಗ್ಯ ಪರಿಹಾರವು ನೀಡಿಲ್ಲ. ಭೂಮಿಯಲ್ಲಿ ಬೆಳೆ ಇದ್ದಾಗಲೂ ಅದನ್ನು ನಾಶಪಡಿಸಿ ಕಾಮಗಾರಿ ಮಾಡಲು ಹೊರಟಿರುವುದು ಅನ್ನದಾತರಿಗೆ ಮಾಡುತ್ತಿರುವ ಅನ್ಯಾಯ. ಕೂಡಲೇ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹೊಲದಲ್ಲಿ ಗೋವಿನಜೋಳ, ಕಬ್ಬು, ಮೆಣಸಿನಕಾಯಿ, ಜೋಳ ವಿವಿಧ ಬೆಳೆ ಬೆಳೆದಿದ್ದೇವೆ. ಜಮೀನು ಸ್ವಾಧೀನಪಡಿಸಿಕೊಂಡು 5-6 ವರ್ಷವಾಗಿದೆ. ಹಿಂಗಾರು ಹಂಗಾಮಿನ ಬೆಳೆ ಕಟಾವು ಮಾಡುವವರೆಗೂ ಅಡ್ಡಿ ಮಾಡಬಾರದು. ಯೂನಿಟ್-3 ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರರು ಯಾವುದೇ ಮುನ್ಸೂಚನೆ ನೀಡದೆ ಗೋಧಿ ಬೆಳೆಯನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಿದ್ದಾರೆ. ಬಿಟಿಡಿಎ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಈ ವೇಳೆ ಬಿಟಿಡಿಎ ಅಧಿಕಾರಿಗಳು, ಪೊಲೀಸರು, ರೈತರ ನಡುವೆ ವಾಗ್ವಾದ ನಡೆಯಿತು.
ಬಿಟಿಡಿಎ ಸೂಪರಿಂಡೆಂಟ್ ಇಂಜಿನಿಯರ್ ವಿಜಯಕುಮಾರ ಹೆಬ್ಬಳ್ಳಿ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಕಳೆದ ಐದಾರು ವರ್ಷಗಳ ಹಿಂದೆಯೇ ನಿಮಗೆ ಪರಿಹಾರ ನೀಡಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ನವನಗರ ಯೂನಿಟ್-3 ನಿರ್ಮಾಣಕ್ಕೆ ಟೆಂಡರ್ ಕೂಡ ಕರೆದಿದ್ದು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಈ ಕಾರ್ಯಕ್ಕೆ ಅಡ್ಡಿಪಡಿಸಬಾರದು. ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ರೈತರು ನಮಗೆ ಯೋಗ್ಯ ಪರಿಹಾರ ಸಿಕ್ಕಿಲ್ಲ. ಅಲ್ಲದೆ, ನಮ್ಮ ಉಳಿದ ಭೂಮಿಯ ಪಹಣಿಯಲ್ಲಿ ಬಿಟಿಡಿಎ ಹೆಸರು ದಾಖಲಿಸಲಾಗಿದೆ. ಇದರಿಂದ ನಾವು ಸಾಲ ಪಡೆಯಲು ಆಗುತ್ತಿಲ್ಲ. ಬೇರೆಯವರಿಗೆ ಮಾರಾಟ ಮಾಡಲೂ ಆಗುತ್ತಿಲ್ಲ. ಬರದಲ್ಲೂ ಒಂದಷ್ಟು ಬೆಳೆ ಬೆಳೆದಿದ್ದು, ಅದನ್ನು ನಾಶಪಡಿಸಿದರೆ ರೈತರಿಗೆ ಹಾನಿಯಾಗುತ್ತದೆ. ಸ್ವಲ್ಪವೂ ಕನಿಕರ ಇಲ್ಲವೆ ಎಂದು ಪ್ರಶ್ನಿಸಿದರು. ನಂತರ ರೈತರು-ಅಧಿಕಾರಿಗಳ ಮಧ್ಯೆ ವಾಗ್ವಾದವೂ ನಡೆಯಿತು. ಬೆಳೆ ನೆಲಸಮಗೊಳಿಸಿದ್ದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಬಳಿಕ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.