

ಸವಣೂರ: ತಾಲೂಕಿನ ರೈತರಿಗೆ ಪೂರೈಸಬೇಕಿದ್ದ 755 ಟನ್ ಡಿಎಪಿ ರಸಗೊಬ್ಬರ ಬೇರೆ ಬೇರೆ ತಾಲೂಕಿಗೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಶಾಸಕ ಯಾಸೀರಖಾನ್ ಪಠಾಣ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಮಂಗಳವಾರ ರೈತರ ಅಹವಾಲು ಸ್ವೀಕಾರ ಹಾಗೂ ಸಮಸ್ಯೆ ಪರಿಹಾರ ಸಭೆ ಏರ್ಪಡಿಸಲಾಗಿತ್ತು.
ಸಭೆ ಆರಂಭವಾಗುತ್ತಿದ್ದಂತೆ ಬಿತ್ತನೆಗೆ ಡಿಎಪಿ ರಸಗೊಬ್ಬರ ಲಭ್ಯವಾಗದ ವಿಷಯ ಪ್ರಸ್ತಾಪಿಸಿದ ರೈತರು, ತಾಲೂಕಿನಗೆ ಪೂರೈಕೆಯಾಗಬೇಕಿದ್ದ 755 ಟನ್ ಡಿಎಪಿ ಗೊಬ್ಬರ ಬೇರೆ ಬೇರೆ ತಾಲೂಕಿಗೆ ಹೋಗಿದೆ. ಇದರಿಂದ ಇಲ್ಲಿನ ರೈತರು ಡಿಎಪಿ ರಸಗೊಬ್ಬರಕ್ಕಾಗಿ ಹೋರಾಟ ಕೈಗೊಳ್ಳಬೇಕಾಗಿದೆ ಎಂದು ಶಾಸಕ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ಡಿಎಪಿ ಗೊಬ್ಬರ ವಿತರಣೆ ಕುರಿತು ಕೂಡಲೇ ಮಾರಾಟಗಾರರಿಂದ ಹಾಗೂ ಸಂಬಂಧಪಟ್ಟರಿಂದ ಮಾಹಿತಿ ಪಡೆದು ರೈತ ಸಂಘಟನೆಗಳ ಪ್ರಮುಖರಿಗೆ ತಲುಪಿಸಬೇಕು. ರೈತರ ಬೇಡಿಕೆಗೆ ಕೂಡಲೇ ಸ್ಪಂದಿಸಬೇಕು. ಬೆಳೆ ವಿಮೆ ವಿತರಣೆಯಲ್ಲಿ ಉಂಟಾಗಿರುವ ಗೊಂದಲ ಕುರಿತು ಮೇಲಧಿಕಾರಿಗಳ ಹಂತದಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರೈತರ ಅಹವಾಲು ಸ್ವೀಕರಿಸುವ ಮಹತ್ವದ ಸಭೆಗೆ ಗೈರಾಗಿರುವ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಅವರಿಗೆ ಶಾಸಕ ಪಠಾಣ ಸೂಚಿಸಿದರು.
ತಹಸೀಲ್ದಾರ್ ಭರತರಾಜ್ ಕೆ.ಎನ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
ಅಕ್ರಮ ಮದ್ಯ ಮಾರಾಟ ತಡೆಯಿರಿ: ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಈ ಕುರಿತು ಹೋರಾಟ ಅನಿವಾರ್ಯವಾಗಲಿದೆ ಎಂದು ರೈತ ಸಂಘಟನೆ ಪದಾಧಿಕಾರಿಗಳು ಶಾಸಕ ಯಾಸೀರಖಾನ್ ಪಠಾಣ ಅವರಿಗೆ ಒತ್ತಾಯಿಸಿದರು. ಈ ಕುರಿತು ರ್ಚಚಿಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಪಠಾಣ ತಿಳಿಸಿದರು.
ಕ್ಷೇತ್ರದ ರೈತರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ವಹಿಸಲಾಗುವುದು. ರೈತರು ಹಾಗೂ ರೈತ ಸಂಘಟನೆಗಳು ಸಹಕಾರ ನೀಡಬೇಕು. | ಯಾಸೀರಖಾನ್ ಪಠಾಣ, ಶಾಸಕ 2700 ಟನ್ ಡಿಎಪಿ ಗೊಬ್ಬರ ಬೇಡಿಕೆ ಇದೆ. ಸದ್ಯ 755 ಟನ್ ಡಿಎಪಿ ಗೊಬ್ಬರ ಸರಬರಾಜು ಆಗಿದೆ. ಇನ್ನೂ 1995 ಟನ್ ಗೊಬ್ಬರ ಅವಶ್ಯವಾಗಿದೆ. ಮುಂದಿನ ನಾಲ್ಕು ದಿನದಲ್ಲಿ ಗೊಬ್ಬರ ಸರಬರಾಜು ಆಗುವ ನಿರೀಕ್ಷೆ ಇದೆ. ಅತ್ಯಂತ ಅವಶ್ಯವಿದ್ದಲ್ಲಿ ಡಿಎಪಿ ಬದಲಾಗಿ ಇತರ ಸಂಯುಕ್ತ ಗೊಬ್ಬರ ಬಳಕೆ ಮಾಡಬೇಕು. | ಸವಿತಾ ಚಕ್ರಸಾಲಿ, ಸಹಾಯಕ ಕೃಷಿ ನಿರ್ದೇಶಕಿ, ಸವಣೂರ