ಕೆಐಡಿಬಿ ವಿರುದ್ಧ ರೈತರ ಆಕ್ರೋಶ

SARJAPURA PROTEST 01
Published on

ವಿಜಯವಾಣಿ ಸುದ್ದಿಜಾಲ ಸರ್ಜಾಪುರ

ಸರ್ಜಾಪುರ ಸ್ವ್‌ಟಿಸಿಟಿ ವಿರುದ್ಧ ರೈತರ ಆಕ್ರೋಶ ವಿಕೋಪಕ್ಕೆ ತಿರುಗಿದ್ದು ಖಾಸಗಿ ಸಂಸ್ಥೆಯ ಸರ್ವೇ ಪ್ರತಿನಿಧಿಗಳ ವಿರುದ್ಧ ತಿರುಗಿಬಿದ್ದ ರೈತರು ಡ್ರೋನ್‌ಕ್ಯಾಮೆರಾ, ಲ್ಯಾಪ್‌ಟಾಪ್ ವಸ್ತುಗಳಿಗೆ ಬೆಂಕಿ ಹಾಕಿ ಆಕ್ರೋಶವನ್ನು ಹೊರ ಹಾಕಿದರು.

ಒಂದುವರೆ ವರ್ಷಗಳಿಂದ ಕೆಐಡಿಬಿ ಭೂಸ್ವಾಧೀನ ವಿರುದ್ಧ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ರೈತರು ಬೈಕ್‌ರ‌್ಯಾಲಿ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು. ಏತನ್ಯಧ್ಯೆ ಕೆಐಡಿಬಿ ಖಾಸಗಿ ಸರ್ವೇ ಪ್ರತಿನಿಧಿಗಳನ್ನು ಕಳಿಸಿ ಸರ್ವೆಕಾರ್ಯಕ್ಕೆ ಮುಂದಾಗಿದ್ದರಿಂದ ಈ ಪ್ರಕರಣ ನಡೆದಿದೆ. ಗಮನಕ್ಕೆ ತರದೆ ಸರ್ವೆ ಮಾಡುತ್ತಿರುವ ಬಗ್ಗೆ ರೈತರ ಪ್ರಶ್ನೆಗೆ ಸರ್ವೆಯರ್‌ಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ರೈತರು ಹಾಗೂ ಸರ್ವೆಯರ್‌ಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ರೊಚ್ಚಿಗೆದ್ದ ರೈತರು ಉಪಕರಣಗಳನ್ನು ಹಾನಿ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಸೂರ್ಯ ಸಿಟಿ ಠಾಣೆ ವೃತ್ತ ನಿರೀಕ್ಷಕ ಸಂಜಯ್ ಮಹಾಜನ್ ಸಿಬ್ಬಂದಿಯೊಂದಿಗೆ ಆಗಮಿಸಿರೈತರ ಮನವೊಲಿಸಲು ಹರಸಾಹಸ ನಡೆಸಿದರು.

ಪ್ರತಿಭಟನೆ ಹಿಂಪಡೆದ ರೈತರು: ಉಪಕರಣಗಳನ್ನು ಸುಟ್ಟುಹಾಕಿದ ಪ್ರದೇಶವನ್ನು ಮಹಜರ್ ಮಾಡಿದ ಪೊಲೀಸರು ಪ್ರತಿಭಟನೆಯನ್ನು ತಹಬಂದಿಗೆ ತರಲು ಪ್ರಯತ್ನಿಸಿದರು. ಆದರೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ರೈತರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಮೋಹನ್‌ಕುಮಾರ್ ಜಿಲ್ಲಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಜ.10 ರಂದು ಆನೇಕಲ್‌ಗೆ ಬರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಸರ್ಕಾರದ ವಿರುದ್ಧ ಆಕ್ರೋಶ:

ಈಗಾಗಲೇ ಸರ್ಕಾರ ಹೊರಡಿಸಿರುವ ಭೂಸ್ವಾಧೀನ ಪ್ರದೇಶದಲ್ಲಿ ರೈತರು ರಾಗಿ, ತೊಗರಿ, ಭತ್ತ, ರೇಷ್ಮೆ, ಹೂ, ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದು ಈ ಭಾಗದ ಬಹುತೇಕ ರೈತರು ಕೃಷಿ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಕೆಐಡಿಬಿ ಅಧಿಕಾರಿಗಳನ್ನು ಪದೇ ಪದೇ ಕಳುಹಿಸಿ ರೈತರನ್ನು ಒಕ್ಕಲಿಬ್ಬಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net