

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ದೊಡ್ಡಬೆಳವಂಗಲ ಹೋಬಳಿ ಹುಲುಕುಂಟೆ ಬಳಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು 600 ಎಕರೆ ಭೂ ಸ್ವಾಧೀನಕ್ಕೆ ಕೆಐಎಡಿಬಿಯಿಂದ ಸಿದ್ಧತೆ ನಡೆದಿದೆ. ಆದರೆ, ಲಾಜಿಸ್ಟಿಕ್ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಈ ಭಾಗದ ರೈತರು, ಪ್ರಧಾನಮಂತ್ರಿ ಕಾರ್ಯಾಲಯ, ಮುಖ್ಯಮಂತ್ರಿ, ಸಂಸದರು, ಕೈಗಾರಿಕಾ ಸಚಿವರಲ್ಲದೆ ಸಿದ್ಧಗಂಗಾ ಮಠದ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳಿಗೂ ಭೂಮಿ ಉಳಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಕಾರ್ಯಾಲಯದಿಂದಲೂ ಪ್ರತಿಕ್ರಿಯೆ ದೊರಕಿದೆ.
ನೆಲಮಂಗಲ ತಾಲೂಕಿನ ಓಬಳಾಪುರ ಹಾಗೂ ದೊಡ್ಡಬಳ್ಳಾಪುರದ ಹುಲಿಕುಂಟೆ ವ್ಯಾಪ್ತಿಯ 1,150 ಎಕರೆಯಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್‌ಪಿ) ಸ್ಥಾಪನೆಯಾಗುತ್ತಿದೆ. ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ ಸ್ವಾಧೀನಕ್ಕೆ ಪ್ರಕಟಣೆ ಹೊರಡಿಸಲಾಗಿದ್ದು, ಹುಲಿಕುಂಟೆ ಕೈಗಾರಿಕಾ ಪ್ರದೇಶದಲ್ಲಿ 600 ಎಕರೆ ಗುರುತಿಸಲಾಗಿದ್ದು, ಸ್ವಾಧೀನ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ.
ಆತಂಕದಲ್ಲಿ ರೈತರ ಬದುಕು: ಪಾರ್ಕ್ ಸ್ಥಾಪನೆಗೆ ಉದ್ದೇಶಿಸಿರುವ ಓಬಳಾಪುರ ಹಾಗೂ ಹುಲಿಕುಂಟೆ ಭಾಗದಲ್ಲಿ ಬಹುತೇಕ ಸಣ್ಣ ಹಿಡುವಳಿದಾರ ರೈತರು ಹೆಚ್ಚಾಗಿದ್ದಾರೆ. ಅಲ್ಲದೆ, ಸಾಕಷ್ಟು ರೈತರು ಕೊಳವೆಬಾವಿ ಕೊರೆಸಿಕೊಂಡು ಅಡಕೆ, ತೆಂಗು, ಬಾಳೆ, ತರಕಾರಿ ಬೆಳೆಯುವ ಮೂಲಕ ಜೀವನ ನಡೆಸುತ್ತಿದ್ದಾರೆ. ಈ ಭಾಗದ ಸಾಕಷ್ಟು ಯುವಕರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಈಗ ಊರಿನತ್ತ ಮುಖ ಮಾಡಿ ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಈಗ ಭೂಮಿ ಸ್ವಾಧೀನವಾದರೆ, ಅತ್ತ ಕೆಲಸವೂ ಇಲ್ಲ. ಇತ್ತ ಕೃಷಿಯೂ ಇಲ್ಲದೆ ಜೀವನ ನಿರ್ವಹಣೆ ಹೇಗೆ ಎಂಬ ಆತಂಕ ಎದುರಾಗಿದೆ.
ಬೃಹತ್ ಪ್ರತಿಭಟನೆಗೆ ಸಿದ್ಧತೆ: ಭೂಮಿ ಸ್ವಾಧೀನ ವಿರೋಧಿಸಿ ಇಂದು (ೆ.4) ಪ್ರತಿಭಟನೆ ನಡೆಸಲು ರೈತರು ಸಿದ್ಧತೆ ಮಾಡಿಕೊಂಡಿದ್ದು, ಶಾಸಕರು, ಮಠಾಧೀಶರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 207 ಬಂದ್ ಮಾಡಲು ನಿರ್ಧರಿಸಿದ್ದಾರೆ.
ಕೃಷಿಭೂಮಿ ಫಲವತ್ತಾಗಿದೆ. ನೀರಾವರಿಯೂ ಉತ್ತಮವಾಗಿದೆ. ರೈತರಿಗೆ ಕೃಷಿಯೇ ಜೀವನಾಧಾರ. ಭೂಮಿ ಇಲ್ಲದಿದ್ದರೆ ನಮ್ಮ ಜೀವನವೂ ಇಲ್ಲ. ಹೋರಾಟದ ಮೂಲಕ ಭೂಮಿ ಉಳಿಸಿಕೊಳ್ಳುತ್ತೇವೆ. ರಾಘು ರಂಗಸ್ವಾಮಿ, ರೈತ ಮುಖಂಡ
ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರತಿಕ್ರಿಯೆ: ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪತ್ರಕ್ಕೆ ಪ್ರತಿಕ್ರಿಯೆ ಬಂದಿದ್ದು, ಉದ್ದೇಶಿತ ಯೋಜನೆಗೆ ಒಟ್ಟು 719 ಎಕರೆ ಜಮೀನು ಸ್ವಾಧೀನಕ್ಕೆ 2020ರ ಡಿಸೆಂಬರ್ 15ರಂದು ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದು, ಅಧಿಸೂಚನೆಗೆ ಸರ್ಕಾರದಿಂದ ಅನುಮೋದನೆಯಾಗಿದೆ. ಪ್ರಕರಣದಲ್ಲಿ ಮಂಡಳಿ ನಿಯಮದ ಅನ್ವಯ ಕ್ರಮ ಕೈಗೊಳ್ಳಬಹುದು ಎಂಬ ಉತ್ತರ ಬಂದಿದೆ.