ಕೃಷಿ ವಿದ್ಯುತ್ ಪಂಪ್​ಗೆ 'ಆಧಾರ್​' ಕುಣಿಕೆ?

UDP-14-1-Aadhar
ಸಾಂದರ್ಭಿಕ ಚಿತ್ರ.
Published on

ಮೆಸ್ಕಾಂ ಆದೇಶಕ್ಕೆ ಕೃಷಿಕ ಸಂಘ ವಿರೋಧ | ಸಬ್ಸಿಡಿ ಕತ್ತರಿಗೆ ಹುನ್ನಾರ ಆರೋಪ

ಪ್ರಶಾಂತ ಭಾಗ್ವತ, ಉಡುಪಿ
ಕೃಷಿ ವಿದ್ಯುತ್​ ಪಂಪ್​ಗಳಿಗೆ ಕೃಷಿಕರು ಕಡ್ಡಾಯವಾಗಿ ಕೂಡಲೇ ಆಧಾರ್​ ನಂಬರ್​ ಜೋಡಿಸಬೇಕು ಎಂದು ಮೆಸ್ಕಾಂ ಇತ್ತೀಚೆಗೆ ಆದೇಶಿಸಿದ್ದು, ಕೃಷಿಕರ ಸಂಘಟನೆ ವಿರೋಧಿಸಿದೆ.

ಇದು ಅನ್ನದಾತನ ವಿದ್ಯುತ್​ ಮತ್ತು ಕೃಷಿ ಸಬ್ಸಿಡಿ ಸೌಲಭ್ಯಗಳಿಗೆ ಕತ್ತರಿ ಹಾಕುವ ಹುನ್ನಾರವಾಗಿದೆ ಎಂದು ಆರೋಪಿಸಿರುವ ಉಡುಪಿ ಜಿಲ್ಲಾ ಕೃಷಿಕ ಸಂಘ, ಯಾವುದೇ ಕೃಷಿಕರೂ ತಮ್ಮ ವಿದ್ಯುತ್​ ಪಂಪ್​ಗಳಿಗೆ ಆಧಾರ್​ ಜೋಡಿಸಬಾರದು ಎಂದು ಕರೆ ನೀಡಿದೆ.

ಸಿಗದ ಪಂಪ್​ಗಳ ಲೆಕ್ಕ

ಕೃಷಿಕರು ಎಷ್ಟು ಪಂಪ್​ಗಳನ್ನು ಬಳಸುತ್ತಿದ್ದಾರೆ ಎನ್ನುವುದು ವಿದ್ಯುತ್​ ನಿಗಮಕ್ಕೆ ತಿಳಿದೇ ಇಲ್ಲ. ಈ ಹಿನ್ನೆಲೆಯಲ್ಲಿಯೇ ರೈತರ ಬಳಿ ಎಷ್ಟು ಪಂಪ್​ ಇದೆ ಎಂದು ಪಕ್ಕಾ ಲೆಕ್ಕ ಸಂಗ್ರಹಿಸಲು ದಿಢೀರ್​ ಆಗಿ ಕೃಷಿಕರು ತಮ್ಮ ಪಂಪ್​ಗಳಿಗೆ ಆಧಾರ್​ ಲಿಂಕ್​ ಮಾಡಬೇಕೆಂದು ಮೆಸ್ಕಾಂ ಆದೇಶಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

UDP-14-1A-Aadhar

ದುರ್ಬಳಕೆ ಮಾಡದ ರೈತ

ದೇಶದಲ್ಲಿರುವ ಶ್ರೀಮಂತರು, ದೊಡ್ಡ ಉದ್ಯಮಿಗಳು ಬೇಕಾಬಿಟ್ಟಿಯಾಗಿ ವಿದ್ಯುತ್​ ಬಳಸುತ್ತಾರೆ. ಅವರು ವ್ಯಯಿಸಿದ ವಿದ್ಯುತ್​ಗೆ ಎಷ್ಟೇ ಬಿಲ್​ ಬಂದರೂ ಭರಿಸಲು ಸಮರ್ಥರಿರುತ್ತಾರೆ. ಆದರೆ, ರೈತರು ಎಂದಾದರೂ ಅನಗತ್ಯವಾಗಿ ವಿದ್ಯುತ್​ ದುರ್ಬಳಕೆ ಮಾಡಿಕೊಳ್ಳುತ್ತಾರೆಯೇ ಎನ್ನುವುದು ಕೃಷಿಕರ ಪ್ರಶ್ನೆಯಾಗಿದೆ.

ಕುಟುಂಬಗಳ ನಡುವೆ ಕಲಹಕ್ಕೆ ನಾಂದಿ?

ಕರಾವಳಿ ಜಿಲ್ಲೆಗಳಲ್ಲಿ ತುಂಡುಭೂಮಿ ಹಿಡುವಳಿ ಕೃಷಿಕರೇಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಇರುವ ಜಮೀನಿನ ಪಹಣಿ ಪತ್ರಿಕೆ, ಖಾತೆ ವಿಲೇವಾರಿ ಗೊಂದಲಗಳು ಹಲವಾರು ಇವೆ. ಈಗಾಗಲೇ ಮೃತಪಟ್ಟಿರುವ ಮುತ್ತಜ್ಜ, ಅಜ್ಜ, ತಂದೆ ಹಾಗೂ ಮಾವ-ಮಕ್ಕಳ ಹೆಸರಲ್ಲೇ ಅನೇಕರ ಜಮೀನು ಇದೆ. ಅಂತಹ ಕುಟುಂಬಗಳ ಪಾಲು ಪಟ್ಟಿಯಾಗಿರದ ಕೃಷಿ ಪಂಪ್​ಗಳಿಗೆ ಯಾವ ವಾರೀಸುದಾರರ ಆಧಾರ್​ ನಂಬರ್​ ಜೋಡಿಸಬೇಕು? ಈ ಪ್ರಕ್ರಿಯೆಗೆ ಮುಂದಾದಲ್ಲಿ ಕರಾವಳಿ ಜಿಲ್ಲೆಯ ಬಹುತೇಕ ಕೃಷಿಕ ಕುಟುಂಬಗಳಲ್ಲಿ ಕಲಹ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೃಷಿ ಕ್ಷೇತ್ರಕ್ಕೆ ಹಿನ್ನಡೆ ಖಂಡಿತ

ಈಗಾಗಲೇ ಜೋಡಣೆಯಲ್ಲಿರುವ ಕೃಷಿ ಪಂಪ್​ಗಳಿಗೆ ಸಂಪೂರ್ಣ ಮೀಟರೀಕರಣ ಆಗಿಲ್ಲ. ಮೀಟರ್​ ಇದ್ದರೂ ಅರ್ಧಕ್ಕಿಂತ ಹೆಚ್ಚು ಸುಸ್ಥಿಯಲ್ಲಿಲ್ಲ. ಬಯಲುಸೀಮೆಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳ ಕೃಷಿಕರಿಗೆ ವರ್ಷಪೂರ್ತಿ ನಾಲೆ ನೀರಿನ ಸೌಲಭ್ಯವಿಲ್ಲ. ಈ ಭಾಗದಲ್ಲಿ ಅಕ್ಟೋಬರ್​ನಿಂದ ಮಾರ್ಚ್​ ವರೆಗೆ ಮಾತ್ರ ಪಂಪ್​ನ ಅಗತ್ಯತೆ ಇರುತ್ತದೆ. ಏಪ್ರಿಲ್​ ಹಾಗೂ ಮೇ ತಿಂಗಳಲ್ಲಿ ಬಹುತೇಕ ಎಲ್ಲ ಕೆರೆ-ಬಾವಿಗಳು ಬತ್ತಿ ಹೋಗಿರುತ್ತವೆ. ನೀರಿಗಾಗಿ ಒರತೆ ಇರುವ ಬೇರೆ ಬಾವಿ ತೋಡಿದರೂ ಪಂಪ್​ ಅಳವಡಿಸಲು ಸುಲಭದಲ್ಲಿ ವಿದ್ಯುತ್​ ಇಲಾಖೆ ಅನುಮತಿ ನೀಡುವುದಿಲ್ಲ. ಸಕಾಲದಲ್ಲಿ ನೀರಿನ ವ್ಯವಸ್ಥೆಯಾಗದಿದ್ದರೆ ಕೃಷಿ ಕ್ಷೇತ್ರಕ್ಕೆ ಹಿನ್ನಡೆ ಖಂಡಿತ ಎನ್ನುತ್ತಾರೆ ಕೃಷಿಕರು.

ತೊಂದರೆ ಕೊಟ್ಟರೆ ಪ್ರತಿಭಟಿಸುವ ಎಚ್ಚರಿಕೆ

ಆಧಾರ್​ ಜೋಡಿಸುವಂತೆ ಮೆಸ್ಕಾಂ ಆದೇಶ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘ ಇತ್ತೀಚೆಗೆ ಸಭೆ ನಡೆಸಿ, ವಿಸ್ತೃತ ಚರ್ಚೆ ನಡೆಸಿದೆ. ಆಧಾರ್​ ಲಿಂಕ್​ ಬಳಿಕ ಕೃಷಿಕರನ್ನು ವರ್ಗೀಕರಿಸಿ ಒಂದಕ್ಕಿಂತ ಹೆಚ್ಚು ಪಂಪ್​ ಹೊಂದಿರುವವರಿಗೆ ಮೆಸ್ಕಾಂ ವಿದ್ಯುತ್​ ಬಿಲ್​ ವಸೂಲಿ ಮಾಡಬಹುದು. ಈಗಾಗಲೇ ಹೆಸರು/ಖಾತೆ ಬದಲಾವಣೆಗೆ ಸಾವಿರಾರು ರೂ.ಗಳ ಬಾಂಡ್​ ಪೇಪರ್​ ನೀಡಲು ಒತ್ತಾಯಿಸಲಾಗುತ್ತಿದೆ. ಕೃಷಿಕರ ಸಭೆ ಕರೆಯದೆ, ಇರುವ ಜ್ವಲಂತ ಸಮಸ್ಯೆ ಪರಿಹರಿಸದೆ ಆಧಾರ್​ ಜೋಡಣೆಗೆ ಮುಂದಾಗಬಾರದು. ಈ ನೆಪದಲ್ಲಿ ಕೃಷಿಕರಿಗೆ ಮೆಸ್ಕಾಂ ತೊಂದರೆ ನೀಡಿದರೆ ಜಿಲ್ಲೆಯ ಕೃಷಿಕರು ಒಗ್ಗಟ್ಟಾಗಿ ಪ್ರತಿಭಟಿಸಲು ಸಂಘವು ರ್ನಿಣಯ ಕೈಗೊಂಡಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಲೋ ವೋಲ್ಟೇಜ್​ ಸಮಸ್ಯೆ, ಟ್ರಾನ್ಸ್​ಫಾರ್ಮರ್​, ವಿದ್ಯುತ್​ ತಂತಿಗಳ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಪ್ರಮುಖ ಅವಶ್ಯಕತೆಯಾದ ಲೈನ್​ಮನ್​ಗಳೇ ಇಲ್ಲ. ಅದನ್ನೆಲ್ಲ ಸರಿಪಡಿಸಿಕೊಳ್ಳದೆ ಕೃಷಿಕರ ಪಂಪ್​ಗೆ ಆಧಾರ್​ ಜೋಡಿಸುವ ಅಗತ್ಯತೆ ಏನಿದೆ? ಕೂಡಲೇ ಮೆಸ್ಕಾಂನವರು ಜಿಲ್ಲೆಯ ಕೃಷಿಕರೊಂದಿಗೆ ಸಭೆ ನಡೆಸಿ, ಆಧಾರ್​ ಜೋಡಣೆಗೆ ಕಾರಣವೇನೆಂದು ಸ್ಪಷ್ಟೀಕರಣ ನೀಡಬೇಕು. ರಾಮಕೃಷ್ಣ ಶರ್ಮ ಬಂಟಕಲ್ಲು.ಅಧ್ಯಕ್ಷ, ಜಿಲ್ಲಾ ಕೃಷಿಕ ಸಂಘ ಉಡುಪಿ

ಎಲ್ಲ ಕೃಷಿಕರು ತಮ್ಮ ಪಂಪ್​ಗಳಿಗೆ ಕಡ್ಡಾಯವಾಗಿ ಆಧಾರ್​ ಜೋಡಿಸುವಂತೆ ಸರ್ಕಾರ ಮತ್ತು ಹೆಸ್ಕಾಂ ಆದೇಶ ಹೊರಡಿಸಿದೆ. ಈ ಕಾರ್ಯ ಮಾಡದಿದ್ದಲ್ಲಿ ಮುಂದೆ ಅವರಿಗೆ ವಿದ್ಯುತ್​ ಸಬ್ಸಿಡಿ ಲಭಿಸಲು ತೊಡಕಾಗಬುದು. ಜೋಡಣೆಗೆ ಇದೇ ಜು.15 ಅಂತಿಮ ದಿನವಾಗಿತ್ತು. ಆದರೆ, ಭಾರಿ ಮಳೆ ಹಾಗೂ ಕೃಷಿ ಚಟುವಟಿಕೆಯ ದಿನಗಳಾಗಿದ್ದರಿಂದ ವಿನಾಯಿತಿ ನೀಡಿದ್ದೇವೆ. ದಿನೇಶ್​ ಉಪಾಧ್ಯಾಯ.ಅಧೀಕ್ಷಕ ಇಂಜಿನಿಯರ್​. ಮೆಸ್ಕಾಂ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net