ಕುಲಾಂತರಿ ತಳಿಗಳ ಪ್ರಯೋಗಕ್ಕೆ ರೈತರ ವಿರೋಧ

mysore
Published on

ಮೈಸೂರು: ಕುಲಾಂತರಿ ಬಿಟಿ ಹತ್ತಿ, ಜೋಳ ತಳಿಗಳ ಪ್ರಯೋಗ ನಡೆಸಲು ರಾಜ್ಯದ ಜೈವಿಕ ತಂತ್ರಜ್ಞಾನ ಸಮನ್ವಯ ಸಮಿತಿಯು ಖಾಸಗಿ ಬೀಜ ಕಂಪನಿಯೊಂದಕ್ಕೆ ಅನುಮತಿ ನೀಡಿರುವುದು ನಿಯಮಬಾಹಿರವಾಗಿದೆ. ಹೀಗಾಗಿ ಈ ಅನುಮತಿ ವಾಪಸು ಪಡೆಯಬೇಕು ಎಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಒತ್ತಾಯಿಸಿದೆ.


‘ಎರಡು ಹೊಸ ತಳಿಗಳು ಕಳೆನಾಶಕ ಹಾಗೂ ಕ್ರಿಮಿನಾಶಕ ನಿರೋಧಕ ಗುಣ ಹೊಂದಿವೆ. ಶೇ.30 ರಿಂದ 70 ರಷ್ಟು ಇಳುವರಿ ಹೆಚ್ಚಿಸಲಿವೆ’ ಎಂದು ಹೇಳಲಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಕುಲಾಂತರಿ ಹತ್ತಿ ಬೆಳೆಯುವ ಪ್ರದೇಶದಲ್ಲಿಯೇ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ರೈತರ ಬೀಜ ಸ್ವಾತಂತ್ರೃದ ಹರಣವಾಗಲಿದೆ ಎಂದು ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸೋಮವಾರ ತಿಳಿಸಿದರು.


ಕೃಷಿ ವಿವಿಯಲ್ಲಿ ಪ್ರಯೋಗ ನಡೆಸದೇ ಬಹಿರಂಗ ಪ್ರದೇಶದಲ್ಲಿ ಕುಲಾಂತರಿ ತಳಿ ಬಿತ್ತನೆ ನಡೆಸುವುದು ಸರಿಯಲ್ಲ. ಒಂದು ವೇಳೆ ಈ ಅನುಮತಿ ವಾಪಸು ಪಡೆಯದಿದ್ದರೆ ಅಂತಹ ಗಿಡಗಳನ್ನು ರೈತ ಸಂಘದಿಂದಲೇ ಕಿತ್ತೊಗೆಯಲಿದೆ ಎಂದು ಎಚ್ಚರಿಸಿದರು.


ಕೃಷಿ ಭೂಮಿಗಳ ಗುತ್ತಿಗೆ ಕಾನೂನುಬದ್ಧಗೊಳಿಸುವಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ತಿಳಿಸಿದೆ. ಭೂಮಿ ಬೀಳು ಬೀಳಲು ಇರುವ ಕಾರಣ ಪತ್ತೆ ಹಚ್ಚಿ ಸಮಸ್ಯೆ ನಿವಾರಿಸಬೇಕೆ ಹೊರತು ಗುತ್ತಿಗೆ ಪದ್ಧತಿ ಕ್ರಮಬದ್ಧಗೊಳಿಸುವುದಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.


ಕಿಸಾನ್ ಸತ್ಯಾಗ್ರಹ ಸಾಕ್ಷೃಚಿತ್ರವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸರ್ಕಾರ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು. ಸಂಘದ ಮುಖಂಡರಾದ ವಿದ್ಯಾಸಾಗರ್, ಮಂಜುಕಿರಣ್, ಹಿಮ್ಮಾವು ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net