

ಮಂಡ್ಯ: ಹಲವು ದಿನದಿಂದ ತಣ್ಣಗಾಗಿದ್ದ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆ ಜಾರಿಗೊಳಿಸುವ ವಿಶ್ವಾಸ ವಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಹೋರಾಟಗಾರರು ಡಿಸಿಎಂ ಹಾಗೂ ರಾಜ್ಯಸರ್ಕಾರಕ್ಕೆ ಚಳವಳಿಯ ಎಚ್ಚರಿಕೆ ನೀಡಿದ್ದಾರೆ.
ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮಾದರಿ ಅಭಿವೃದ್ಧಿಪಡಿಸುವುದಾಗಿ ರಾಜ್ಯಸರ್ಕಾರ ಘೋಷಣೆ ಮಾಡಿತ್ತು. ಆದರೆ ಅಂದಿನಿಂದಲೂ ಸಂಘಟನೆಗಳು ಇದಕ್ಕೆ ವಿರೋಧ ಮಾಡುತ್ತಲೇ ಇವೆ. ಕೆಲ ತಿಂಗಳು ಯೋಜನೆ ಕುರಿತು ವಿಷಯ ಪ್ರಸ್ತಾಪವಾಗಿರಲಿಲ್ಲ. ಆದ್ದರಿಂದ ವಿರೋಧಕ್ಕೆ ಹೆದರಿ ಕೈಬಿಟ್ಟಿರಬಹುದೆಂದು ಹೋರಾಟಗಾರರು ಸುಮ್ಮನಾಗಿದ್ದರು. ಆದರೀಗ ಡಿಸಿಎಂ ಹೇಳಿಕೆ ಚರ್ಚೆ ಹುಟ್ಟುಹಾಕಿದಲ್ಲದೆ, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಯೋಜನೆ ಬಗ್ಗೆ ಡಿಸಿಎಂ ಹೇಳಿದ್ದೇನು?: ಶುಕ್ರವಾರ ಕೆಆರ್‌ಎಸ್‌ಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಬೃಂದಾವನ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಲಾಗುವುದು. 4 ಗ್ರಾಮ ಪಂಚಾಯಿತಿ ಒಳಗೊಂಡಂತೆ ಪ್ರಾಧಿಕಾರ ರಚನೆಯಾಗಲಿದೆ. ಪಂಚಾಯತಿ ಅಧಿಕಾರ ಮೊಟಕುಗೊಳಿಸದೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಗಲಿದೆ. ಈ ಮೂಲಕ ಸ್ಥಳೀಯರ ಉದ್ಯೋಗಾವಕಾಶಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಹಣದ ಅವಶ್ಯಕತೆ ಇದ್ದರೆ ಇತರೆ ಇಲಾಖೆಗಳಿಂದ ಸಹಕಾರ ಪಡೆಯಲಾಗುವುದು. ಅಮ್ಯೂಸ್ಮೆಂಟ್ ಪಾರ್ಕ್ ಅಭಿವೃದ್ಧಿಯನ್ನು ಮಾಡುತ್ತೇವೆ. 7 ಜನ ಟೆಂಡರ್‌ಗೆ ಅರ್ಜಿ ಹಾಕಿದ್ದಾರೆ. ಅದನ್ನೂ ಮಾಡೇ ಮಾಡುತ್ತೇವೆ ಎಂದರು. ಅಂತೆಯೇ ಡ್ಯಾಂಗೆ ಹಾನಿಯಾಗಲಿದೆ ಎಂದು ಸಂಘಟನೆಗಳ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಘಟನೆಗಳಿಗೆ ಇದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ಪಾರ್ಕ್ ಹೆಸರಿನಲ್ಲಿ ಸರ್ಕಾರದ ವ್ಯಾಪಾರೀಕರಣ: ಕನ್ನಂಬಾಡಿ ಅಣೆಕಟ್ಟೆ ಮುಖ್ಯದ್ವಾರದ ಬಳಿ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಹೆಸರಿನಲ್ಲಿ ರಾಜ್ಯ ಸರ್ಕಾರ ವ್ಯಾಪಾರೀಕರಣ ಮಾಡಲು ಮುಂದಾಗಿದೆ ಎಂದು ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆರೋಪಿಸಿದರು.
ಕಾವೇರಿ ಆರತಿ ಯಾರಿಗೆ ಬೇಕಾಗಿದೆ. ರೈತರಿಗೆ ನಿಜವಾಗಲೂ ಬೇಕಾಗಿರುವುದು ನೀರು. ಮದ್ದೂರು ಮತ್ತು ಮಳವಳ್ಳಿ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಅಣೆಕಟ್ಟೆಗೆ ಧಕ್ಕೆ ತರುವ ಯೋಜನೆಯನ್ನು ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಲು ಹೊರಟಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೆಆರ್‌ಎಸ್ ಬೃಂದಾವನಕ್ಕೆ ಹೋಗುವ ಪ್ರವಾಸಿಗರ ಪಾರ್ಕಿಂಗ್‌ಗೆ 300 ರಿಂದ 400 ರೂ ದರ ನಿಗದಿ ಮಾಡಿದ್ದಾರೆ. ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೆಚ್ಚು ದರ ನಿಗದಿ ಮಾಡುತ್ತಾರೆ. ಇದು ಸಾಮಾನ್ಯ ಜನರು, ಬಡವರು ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ರೈತರಿಗಾಗಿ, ರಾಜ್ಯದ ಜನರ ಒಳಿತಿಗಾಗಿ ಯೋಜನೆ ರೂಪಿಸಬೇಕು. ಅದು ಬಿಟ್ಟು ಅಣೆಕಟ್ಟೆಗೆ ಮಾರಕವಾಗುವಂತಹ ಯೋಜನೆ ರೂಪಿಸಿ ಒಂದು ವೇಳೆ ಅದಕ್ಕೆ ಧಕ್ಕೆಯಾದರೆ ಯಾರು ಹೊಣೆ?. ಇವರು 5 ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ನಂತರ ಹೋಗುತ್ತಾರೆ. ಇದರ ಜವಾಬ್ದಾರಿ ತೆಗೆದುಕೊಳ್ಳುವವರಾದರೂ ಯಾರು ಎಂದು ವಾಗ್ದಾಳಿ ನಡೆಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷಿ ಚಟುವಟಿಕೆಯ ಉದ್ದೇಶದಿಂದ ಕೆಆರ್‌ಎಸ್ ಡ್ಯಾಂ ನಿರ್ಮಾಣ ಮಾಡಿದರು. ಆಳುವ ಸರ್ಕಾರಗಳು ಬಂದ ನಂತರ ಅದನ್ನು ಕುಡಿಯುವ ನೀರಿಗಾಗಿಯೂ ಬಳಸಿಕೊಳ್ಳಲು ಪ್ರಾರಂಭಿಸಿವೆ. ಬೆಂಗಳೂರಿಗೆ ಅತಿ ಹೆಚ್ಚು ನೀರು ಕೊಂಡೊಯ್ಯುತ್ತಿದ್ದಾರೆ. ಇದರೊಂದಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಹೆಸರಿನಲ್ಲಿ ವ್ಯಾಪಾರೀಕರಣ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸರ್ಕಾರಕ್ಕೆ ನಿಜವಾಗಲೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಮೊದಲು ನಾಲೆಗಳನ್ನು ಆಧುನೀಕರಣಗೊಳಿಸಿ, ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ಕೆಲಸ ಮಾಡಿ. ಒಂದು ಬಾರಿ ನೀರು ತಲುಪಿದರಷ್ಟೇ ಕೊನೇ ಭಾಗದ ರೈತರು ಸಂತಸ ಪಡಬೇಕು. ಉಳಿದ ಸಂದರ್ಭದಲ್ಲಿ ನೀರೇ ಹೋಗುವುದಿಲ್ಲ. ಇದನ್ನು ಮೊದಲು ಸರಿಪಡಿಸಿ ಎಂದು ಒತ್ತಾಯಿಸಿದರು.
ಕಾವೇರಿಗೆ ಆರತಿ ಎಂಬ ಸ್ಲೋಗನ್ ಬಳಸಿ ಅಲ್ಲಿನ ಪರಿಸರ ಮತ್ತು ನೈರ್ಮಲ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಯೋಜನೆಯ ಉದ್ದೇಶ ಸಂಪೂರ್ಣ ಹಣ ಮಾಡುವ ಉದ್ದೇಶವಾಗಿದೆ. ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಇಂತಹ ಯೋಜನೆಗಳಿಂದ ಸರ್ಕಾರದ ಲಾಭದ ಉದ್ದೇಶ ಹೊಂದಿದೆಯೇ ಹೊರತು ಬೇರೆನೂ ಅಲ್ಲ ಎಂದು ಹೇಳಿದರು.
ಮಾಧ್ಯಮ ಕಾರ್ಯದರ್ಶಿ ಸೋ.ಸಿ.ಪ್ರಕಾಶ್ ಮಾತನಾಡಿ, ಕೋಟ್ಯಂತರ ರೂ ಹೂಡಿಕೆ ಮಾಡಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಲು ಹೊರಟಿರುವುದು ಯಾವ ಉದ್ದೇಶಕ್ಕೆ?. ಈ ಬಗ್ಗೆ ಜಿಲ್ಲಾ ರೈತ ಏಕೀಕರಣ ಸಮಿತಿ ವತಿಯಿಂದ ಸಭೆ ಸೇರಿ ಚರ್ಚೆ ನಡೆಸಲಾಗಿದೆ. ಕೆ.ಆರ್.ಎಸ್.ನಲ್ಲಿ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಯೋಜನೆ ವಿರೋಧಿಸಿ ಮೇ. 6ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಈ ಯೋಜನೆಯನ್ನು ಕೈ ಬಿಡದಿದ್ದರೆ ಹಂತ ಹಂತವಾಗಿ ಹೋರಾಟ ರೂಪಿಸಿ ಜಿಲ್ಲೆಯ ರೈತರು, ಸಾರ್ವಜನಿಕರು ಸಂಘ ಸಂಸ್ಥೆಗಳೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಗೌಡ, ಮುಖಂಡರಾದ ಮಹೇಂದ್ರ, ಮಲ್ಲೇಶ್, ಲಿಂಗರಾಜು ಇದ್ದರು.