ಹೆಚ್ಚುವರಿ ಭೂಮಿ ಸ್ವಾಧೀನಕ್ಕೆ ರೈತರ ವಿರೋಧ

Farmers oppose additional land acquisition
ತೇರದಾಳ ಪುರಸಭೆ ಸಭಾಭವನದಲ್ಲಿ ಭೂಸ್ವಾಧೀನ ಕುರಿತು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಧ್ಯಕ್ಷತೆಯಲ್ಲಿ ತೇರದಾಳ ಹಾಗೂ ಸಸಾಲಟ್ಟಿ ಗ್ರಾಮದ ರೈತರ ಸಭೆ ನಡೆಯಿತು. ಗಿರೀಶ ಸ್ವಾದಿ, ವಿಜಯಕುಮಾರ ಕಡಕೋಳ, ನಾರಾಯಣ, ಶ್ರೀಕಾಂತ ಮಾಯನ್ನವರ ಮತ್ತಿತರರಿದ್ದಾರೆ.
Published on

ತೇರದಾಳ: ಬಾಗಲಕೋಟೆ-ಕುಡಚಿ ರೈಲ್ವೆ ಕಾಮಗಾರಿಗೆ ಹೆಚ್ಚುವರಿ ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಪುರಸಭೆ ಸಭಾಭವನದಲ್ಲಿ ತೇರದಾಳ ಹಾಗೂ ಸಸಾಲಟ್ಟಿ ಗ್ರಾಮದ ರೈತರ ಸಭೆ ಮಂಗಳವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಮೂರನೇ ಹಂತವಾಗಿ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತೇರದಾಳ ಹಾಗೂ ಸಸಾಲಟ್ಟಿ ವ್ಯಾಪ್ತಿಯ ಜಮೀನುಗಳ ಸರ್ವೇ ನಂಬರ್ ಗುರುತಿಸಿದ್ದಾರೆ. ಮೊದಲ ಹಂತವಾಗಿ ಬೇಕಾಗಿರುವ ಜಾಗದಲ್ಲಿ ಗುರುತಿನ ಕಲ್ಲುಗಳನ್ನು ಹಾಕಲಾಗುತ್ತದೆ. ಬಳಿಕ ಸರ್ಕಾರಕ್ಕೆ ಭೂ ಸ್ವಾಧೀನ ಕುರಿತು ವರದಿ ಸಲ್ಲಿಸಲಾಗುವುದು. ಸರ್ಕಾರದ ಆದೇಶದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಳ್ಳುವುದು. ರೈತರು ಕಲ್ಲುಗಳನ್ನು ಹಾಕಲು ಬಿಡಬೇಕೆಂದು ಮನವಿ ಮಾಡಿದರು.

ಭೂಪಾಲ ಮಾಲಗಾಂವಿ ಮಾತನಾಡಿ, ಅಕ್ಕ-ಪಕ್ಕದ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಆದರೆ ಮಧ್ಯ ಇರುವ ನಮ್ಮ ಜಮೀನು ಮಾತ್ರ ಸ್ವಾಧೀನದ ಕುರಿತು ನೋಟಿಸ್ ನೀಡಿಲ್ಲ. ಸ್ವಾಧೀನ ಮಾಡಿಕೊಳ್ಳುತ್ತಿರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸರ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವರ್ಷವಾದರೂ ಇದುವರೆಗೆ ಮಾಹಿತಿ ನೀಡಿಲ್ಲ ಎಂದರು.

ಭೂಸ್ವಾಧೀನಕ್ಕಾಗಿ ಗುರುತಿಸಿರುವ ಜಮೀನುಗಳ ರೈತರಾದ ರಮೇಶ ಕಿತ್ತೂರ, ಅಲ್ಲಪ್ಪ ಮದಲಮಟ್ಟಿ, ಮಹೇಶ ಕಾಲತಿಪ್ಪಿ, ಮಾಲಗಾಂವಿ, ಮಗದುಂ, ಸುರೇಶ ಕಾಲತಿಪ್ಪಿ, ಪ್ರವೀಣ ಅವರಾದಿ ಮತ್ತಿತರರು ಮಾತನಾಡಿ, ನಾವು ಪರಿಹಾರ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಈಗ ಅದೇ ಸರ್ವೇ ನಂಬರಗಳಲ್ಲಿ ಮತ್ತೆ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಳ್ಳುವ ವಿಷಯ ಪ್ರಸ್ತಾಪ ಮಾಡುತ್ತಿದ್ದೀರಿ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ಭೂಸ್ವಾಧೀನ ಮಾಡುವುದು ಬೇಡ ಎಂದು ತಿಳಿಸಿದರು.

ರೈತರ ಹಟಕ್ಕೆ ಅಧಿಕಾರಿಗಳು ಸಭೆ ಮೊಟಕುಗೊಳಿಸಿ ತೆರಳಿದರು. ತಹಸೀಲ್ದಾರ್ ಗಿರೀಶ ಸ್ವಾದಿ, ವಿಜಯಕುಮಾರ ಕಡಕೋಳ, ರೈಲ್ವೆ ಇಲಾಖೆಯ ನಾರಾಯಣ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net