

ಮುಂಡರಗಿ: ಮುಂಡರಗಿ ತಾಲೂಕನ್ನು ಬರಪೀಡತ ಎಂದು ಘೋಷಣೆ ಮಾಡದೆ ತಾಲೂಕಿನ ಜನತೆಗೆ ಅನ್ಯಾಯ ಮಾಡಲಾಗಿದೆ. ರಾಜ್ಯ ಸರ್ಕಾರವು ಯಾವುದೋ ಮಾನದಂಡದ ನೆಪದಲ್ಲಿ ತಾಲೂಕಿಗೆ ಮಲತಾಯಿ ಧೋರಣೆ ಅನುಸರಿಸಿದ್ದು ಸಾಬೀತಾಗಿದೆ. ಸರ್ಕಾರದ ಈ ನಡೆ ತೀವ್ರ ಖಂಡನೀಯ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಹಲವು ದಶಕಗಳಿಂದ ನಿರಂತರವಾಗಿ ಬರಗಾಲಕ್ಕೆ ಈಡಾಗುತ್ತಲಿದೆ. ಜಿಲ್ಲೆಯ ಇನ್ನುಳಿದ ತಾಲೂಕುಗಳಿಗಿಂತಲೂ ಈ ವರ್ಷ ಇಲ್ಲಿ ತುಂಬಾ ಮಳೆ ಕಡಿಮೆಯಾಗಿದೆ. ಬಿತ್ತನೆ ಮಾಡಿದ ಗೋವಿನಜೋಳ, ಸೂರ್ಯಕಾಂತಿ ಇತರೆ ಬೆಳೆಗಳು ನಾಶವಾಗಿದೆ. ಆದರೂ ಸರ್ಕಾರ ತಾಲೂಕುನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಯಾವ ಮಾನದಂಡದ ಮೇಲೆ ತಾಲೂಕನ್ನು ಕಡೆಗಣಿಸಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಜನ ಹಾಗೂ ಜಾನುವಾರುಗಳು ಬರಗಾಲದಿಂದ ತತ್ತರಿಸುತ್ತಿದ್ದು, ತಕ್ಷಣ ಮುಂಡರಗಿ ತಾಲೂಕನ್ನು ಬರಗಾಲಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿದರು.
ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳುವ ಕುರಿತು ಪುರಸಭೆ ಮೈದಾನದಲ್ಲಿ ಸೆ.15ರಂದು ಬೆಳಗ್ಗೆ 11:30ಕ್ಕೆ ವಿವಿಧ ಸಂಘಟನೆಗಳ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯ ನಂತರ ವಿವಿಧ ರೈತ ಪ್ರಮುಖರೊಂದಿಗೆ ತಾಲೂಕಿನ ಮಳೆ ಇಲ್ಲದೆ ಬೆಳೆನಾಶವಾದ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಿಸಲಾಯಿತು.
ಮುಂಡರಗಿ: ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡದೆ ಅನ್ಯಾಯ ಮಾಡಲಾಗಿದೆ ಎಂದು ತಾಲೂಕು ದಲಿತ ಸಂಘ ಸಮಿತಿಯ ಕಾರ್ಯದರ್ಶಿ ಫಕೀರೇಶ ಮಾದರ ಹೇಳಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗಿಲ್ಲ. ರೈತರು ತೀವ್ರ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿ, ಮುಂಡರಗಿ ತಾಲೂಕನ್ನುಮಾತ್ರ ಘೋಷಣೆ ಮಾಡದಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.