ಬೆಳೆ ಪರಿಹಾರ, ವಿಮೆಗಾಗಿ ರೈತರ ಪರದಾಟ,  ಕೃಷಿಕರ ಕಾಳಜಿ ವಹಿಸುವರೇ ಜನಪ್ರತಿನಿಧಿಗಳು?,  ಎರಡು ವರ್ಷದ ಬಾಕಿ ಉಳಿಸಿಕೊಂಡ ಸರ್ಕಾರಗಳು

Published on

ಹುಬ್ಬಳ್ಳಿ: ಅತಿವೃಷ್ಟಿಯಾಗಲಿ, ಬರಗಾಲವೇ ಎದುರಾಗಲಿ ಧಾರವಾಡ ಜಿಲ್ಲೆಯ ರೈತರಿಗೆ ಸರ್ಕಾರದ ಪರಿಹಾರ ಎಂಬುದು ಕೈಗೆ ಬಂದಷ್ಟೇ ಎಂಬಂತಾಗಿದೆ.

ಕಳೆದ ವರ್ಷ 2023ರಲ್ಲಿ ಕಡಿಮೆ ಮಳೆಯಾಗಿ ಬೆಳೆ ಒಣಗಿದಾಗ ಸರ್ಕಾರ ಬರಗಾಲ ಘೋಷಣೆ ಮಾಡಿತ್ತು. ಅದರಂತೆ ಎಲ್ಲ ರೈತರಿಗೆ ಪರಿಹಾರ ನೀಡುವ ಭರವಸೆಯನ್ನೂ ನೀಡಿತ್ತು. ಆದರೆ, ಸಮೀಕ್ಷೆ, ಇತ್ಯಾದಿ ನಡೆದ ನಂತರ ಕೆಲ ರೈತರಿಗೆ ಪರಿಹಾರ ಸಿಕ್ಕರೆ ಹೆಚ್ಚಿನ ಕೃಷಿಕರು ಇದರಿಂದ ದೂರ ಉಳಿದರು.

ಇನ್ನು 2024ರಲ್ಲಿ ಎರಡು ಬಾರಿ ಅತಿವೃಷ್ಟಿ ಎದುರಾಗಿದೆ. ಜುಲೈನಲ್ಲಿ ಅತಿಯಾದ ಮಳೆಯಾದರೆ, ಹಿಂಗಾರಿನಲ್ಲಿ ನವೆಂಬರ್, ಡಿಸೆಂಬರ್ ನಲ್ಲಿ ಅತಿ ಮಳೆಯಿಂದ ಬೆಳೆ ಹಾನಿಯಾಗಿದೆ. ಈಗಲೂ ಅಷ್ಟೇ ಸಮೀಕ್ಷೆಗಳು ಆಗಿವೆ. ರೈತರಿಂದಲೂ ಮಾಹಿತಿ, ದಾಖಲೆಗಳನ್ನು ಪಡೆಯಲಾಗಿದೆ. ಆದರೆ, ಪರಿಹಾರ ಹಂಚಿಕೆಯಲ್ಲಿ ಮಾತ್ರ ಪೂರ್ಣ ಪ್ರಮಾಣದ ಪ್ರಕ್ರಿಯೆ ಆಗಲೇ ಇಲ್ಲ. ಎರಡು ವರ್ಷದ ಬೆಳೆ ಪರಿಹಾರ, ವಿಮೆ ಪರಿಹಾರ ಕೊಡಿ ಎಂದು ರೈತರು ಗೋಗರೆಯುತ್ತಿದ್ದಾರೆ.

2023ರಲ್ಲಿ ಉಂಟಾದ ಬರಗಾಲ ಪರಿಹಾರವು ಕೆಲವು ಸಮಸ್ಯೆಗಳಿಂದಾಗಿ ಸುಮಾರು 30& 40 ಸಾವಿರ ಹೆಕ್ಟೇರ್ ನ ಬೆಳೆಗಳಿಗೆ ಇನ್ನೂ ಸಿಕ್ಕಿಲ್ಲ. ವಾಸ್ತವದಲ್ಲಿ 65 ಸಾವಿರ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿತ್ತು. ಈ ಬಗ್ಗೆ ಮಾಹಿತಿ ಸರಿಪಡಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಉಳಿದ ಅರ್ಹರಿಗೆ ಈಗಾಗಲೇ ಪರಿಹಾರ ಜಮಾ ಆಗಿದೆ ಎಂಬುದು ಜಿಲ್ಲಾಡಳಿತದ ಮಾಹಿತಿ.

ಇನ್ನು ಕಳೆದ ಜೂನ್ನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೆ, ಈ ವರ್ಷದ ನವೆಂಬರ್ ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದ ಎದುರಾದ ಬೆಳೆ ಹಾನಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ.

ಸುಮಾರು 47 ಕೋಟಿ ರೂ. ಪರಿಹಾರ ಬರಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಅಂತಿಮ ವರದಿಯನ್ನು ಜಿಲ್ಲಾಡಳಿತ ಕಳುಹಿಸಿಯಾಗಿದೆ. ಇದೆಲ್ಲದರ ಬಗ್ಗೆ ಸರ್ಕಾರದ ಗಮನ ಸೆಳೆದು ರೈತರ ನೆರವಿಗೆ ಧಾವಿಸಬೇಕಾದವರು ಜನಪ್ರತಿನಿಧಿಗಳು. ಅಧಿವೇಶನ ಸಂದರ್ಭದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲಿ ಎನ್ನುತ್ತಾರೆ ಅನ್ನದಾತರು.

ಬೆಳೆ ವಿಮೆ ಮರೀಚಿಕೆ:
ಬೆಳೆವಿಮೆ ಪರಿಹಾರದ ಮೇಲೆ ರೈತರು ವಿಶ್ವಾಸ ಇಡದಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿ ವಿಕೋಪದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಬೆಳೆ ಕಳೆದುಕೊಂಡಾಗ ರೈತರಿಗೆ ವಿಮೆ ಪರಿಹಾರ ಸಿಗಬೇಕು. ಆದರೆ, ರೈತರ ಪಾಲಿಗೆ ಇದು ಕೂಡ ಮರೀಚಿಕೆಯಾಗಿ ಹೋಗಿದೆ. ಬೆಳೆವಿಮೆ ಮಾಡಿಸಿಕೊಂಡ ಕಂಪನಿಗಳು ನಾನಾ ಕಾರಣಗಳನ್ನು ಹೇಳಿ ಪರಿಹಾರ ಮರೆಮಾಚುತ್ತಿವೆ ಎಂಬುದು ರೈತರ ಅಳಲು.

ಅತಿವೃಷ್ಟಿಯಿಂದಾದ ಬೆಳೆ ಹಾನಿ ಕುರಿತು ಈಗಾಗಲೇ ಸಮೀಕ್ಷೆ ಮುಗಿದಿವೆ. ಸುಮಾರು 47 ಕೋಟಿ ರೂ. ಪರಿಹಾರ ಬರಬೇಕಿದೆ. ಹಂಚಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಆರಂಭವಾಗುವ ನಿರೀೆ ಇದೆ. ಬೆಳೆವಿಮೆಗೆ ಸಂಬಂಧಿಸಿ ಜಿಲ್ಲಾ ಹಂತದಲ್ಲಿ ಪ್ರಕ್ರಿಯೆ ಮುಗಿದಿವೆ. ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಪರಿಹಾರ ಬರಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net