

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಅನ್ಯಾಯವಾಗುವಂತಹ ಯಾವ ಕಾರ್ಯವನ್ನೂ ಮಾಡುವುದಿಲ್ಲ. ನನ್ನಿಂದ ಅಂತಹ ಕೆಲಸ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಭೂ ಸುಧಾರಣಾ (2ನೇ ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆ ವೇಳೆ ಅವರು ಮಾತನಾಡಿದರು. ರಾಜ್ಯದಲ್ಲಿನ ಭೂ ಸುಧಾರಣಾ ವಿಧೇಯಕದಲ್ಲಿನ 79 (ಎ ಮತ್ತು ಬಿ)ಯಲ್ಲಿನ ಅಂಶಗಳು ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯದಲ್ಲಿಲ್ಲ. ಅದರಿಂದ ಆ ರಾಜ್ಯಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಹೆಚ್ಚಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ. ಅಲ್ಲದೆ, ನೀರಾವರಿ ಭೂಮಿ ಖರೀದಿಸುವವರು ಕೃಷಿಯನ್ನೇ ಮಾಡಬೇಕು ಎಂಬ ನಿಯಮವಿದೆ. ಅದರಿಂದ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಗೋಹತ್ಯೆ ನಿಷೇಧ ಕಾಯ್ದೆಯೇ ಬೇಡ?: ವಿಧೇಯಕ ವಿರೋಧಿಸಿ ಮಾತಾಡಿದ ಜೆಡಿಎಸ್ನ ಮರಿತಿಬ್ಬೇಗೌಡ, ತಿದ್ದುಪಡಿ ವಿಧೇಯಕ ಜಾರಿ ಬಂದರೆ ಕೃಷಿ ಚಟುವಟಿಕೆ ಕಡಿಮೆಯಾಗುತ್ತದೆ. ಆಗ ನೀವು ಗೋಹತ್ಯಾ ನಿಷೇಧ ಕಾಯ್ದೆ ಜಾರಿ ತರುವ ಅವಶ್ಯಕತೆಯೇ ಇಲ್ಲ. ಎಕೆಂದರೆ ಕೃಷಿ ಚಟುವಟಿಕೆ ಕಡಿಮೆಯಾಗಿ ಜಾನುವಾರುಗಳು ಇಲ್ಲವಾಗುತ್ತದೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಸದಸ್ಯರ ದ್ವಂದ್ವ
ಒಂದೆಡೆ ಜೆಡಿಎಸ್ ಸದಸ್ಯರು ಭೂ ಸುಧಾರಣಾ (2ನೇ ತಿದ್ದುಪಡಿ) ವಿಧೇಯಕ ವಿರೋಧಿಸಿ ಮಾತಾಡಿದರು. ಆದರೆ ಜೆಡಿಎಸ್ನ ರಮೇಶ್ ಗೌಡ, ವಿಧೇಯಕಕ್ಕೆ ತಿದ್ದುಪಡಿ ತಂದಿರುವುದು ಉತ್ತಮವಾದ ಕ್ರಮ. ಇದನ್ನು ಸ್ವಾಗತಿಸುತ್ತೇನೆ ಎಂದು ಭಾಷಣ ಮಾಡಿದರು.
ಕಾಂಗ್ರೆಸ್ಗೆ ವಾಪಸ್ ಬರ್ತೀರಿ
ಭೂ ಸುಧಾರಣಾ (2ನೇ ತಿದ್ದುಪಡಿ) ವಿಧೇಯಕದ ಬಗ್ಗೆ ಕಾಂಗ್ರೆಸ್ನ ಆರ್.ಬಿ.ತಿಮ್ಮಾಪೂರ ಮಾತನಾಡುವಾಗ, ಸಚಿವ ಬಿ.ಎ.ಬಸವರಾಜ ಏನನ್ನೋ ಹೇಳಲು ಮುಂದಾದರು. ಆಗ ತಿಮ್ಮಾಪೂರ್, ಮೊದಲು ಬಿಜೆಪಿ ಬಗ್ಗೆ ತಿಳಿದುಕೊಳ್ಳಿ. ಆನಂತರ ನೀವೇ ವಾಪಸ್ ಬರ್ತೀರಿ. ಆ ಸಂದರ್ಭ ಶೀಘ್ರದಲ್ಲೇ ಬರಲಿದೆ ಎಂದು ಕಿಚಾಯಿಸಿದರು.