ಕುಂದಗೋಳ ಪಿಎಲ್​ಡಿ ಬ್ಯಾಂಕ್​ನಲ್ಲೇ ರೈತರ ನಿರ್ಲಕ್ಷ್ಯ

KND PLD BANK PROTEST
Published on

ಕುಂದಗೋಳ: ಪಟ್ಟಣದಲ್ಲಿ ಗುರುವಾರ ಕರೆದಿದ್ದ ಪಿಎಲ್​ಡಿ ಬ್ಯಾಂಕ್ ಸಾಮಾನ್ಯ ಸಭೆಯು ರೈತರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ರೈತರ ಹೆಸರಲ್ಲಿ ನಡೆಯುವ ಬ್ಯಾಂಕ್​ನಲ್ಲಿಯೇ ರೈತರನ್ನೇ ನಿರ್ಲಕ್ಷಿಸಲಾಗುತ್ತಿದೆ ಎಂದು ಸಭೆ ಬಳಿಕ ರೈತರು ಗಂಭೀರ ಆರೋಪ ಮಾಡಿದರು.

ಸಭೆಯ ಕುರಿತು ನಮಗೆ ನೋಟಿಸ್ ಬಂದಿಲ್ಲ, ಬ್ಯಾಂಕ್​ನ ಸವಲತ್ತುಗಳು ತಲುಪುತ್ತಿಲ್ಲ, ಸತ್ತವರ ಹೆಸರಿನ ಮೇಲೆ ನೋಟಿಸ್ ಕಳುಹಿಸಲಾಗಿದೆ. ನಮ್ಮನ್ನು ಗೌರವಿಸುವುದಿಲ್ಲ. ಒಟ್ಟಾರೆ ರೈತರ ಹಿತದೃಷ್ಟಿ ಮರೆತು ಮನಬಂದಂತೆ ಆಡಳಿತ ನಡೆಸುತ್ತ, ತಮಗೆ ಬೇಕಾದವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಬ್ಯಾಂಕ್ ಅಧಿಕಾರಿ ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಸದಸ್ಯ ಮಂಜುನಾಥ ಯಲಿಗಾರ ಮಾತನಾಡಿ, ಬ್ಯಾಂಕ್​ನಲ್ಲಿ ಪ್ರಾಮಾಣಿಕ ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.

ಸಂಕ್ಲೀಪುರ ಗ್ರಾಮದ ಶಿವರುದ್ರಪ್ಪ ಕುಸುಗಲ್ಲ ಮಾತನಾಡಿ, ನಾಲ್ಕು ವರ್ಷದಿಂದ ಸದಸ್ಯನಾಗಿದ್ದೇನೆ. ಕೇವಲ ಒಮ್ಮೆ 9000 ರೂ. ಸಾಲ ಸಿಕ್ಕಿದೆ. ಈಗ ಸಾಲ ಕೇಳಿದರೆ ಅಧ್ಯಕ್ಷರ ಸಹಿ ಮಾಡಿಸಿಕೊಂಡು ಬನ್ನಿ ಎಂದು ಅಲೆದಾಡಿಸುತ್ತಾರೆ. ಬ್ಯಾಂಕಿನಿಂದ ಯಾವುದೇ ಅನುಕೂಲವಾಗುತ್ತಿಲ್ಲ. ಇದಕ್ಕಿಂತ ಸದಸ್ಯತ್ವ ರದ್ದುಪಡಿಸಿಕೊಳ್ಳುವುದು ಒಳ್ಳೆಯದು ಎಂದು ಬೇಸರ ವ್ಯಕ್ತಪಡಿಸಿದರು.

ಗುರುಪಾದಪ್ಪ ಸಾದ್ವಿ ಮಾತನಾಡಿ, 2023ರಲ್ಲಿ ತೀರಿಕೊಂಡಿರುವ ಅಪ್ಪನ ಹೆಸರಿನ ಮೇಲೆಯೇ ನೋಟಿಸ್ ಬರುತ್ತಿದೆ. ಖಾತೆ ಬದಲಾವಣೆಗೆ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

ರೈತರಾದ ಮಲ್ಲಿಕಾರ್ಜುನ ಗುರನಳ್ಳಿ, ರೈತ ಫಕೀರಪ್ಪ ಮಾತನಾಡಿ, ಬಹುತೇಕರಿಗೆ ನೋಟಿಸ್ ನೀಡದೆ ಅವರನ್ನು ಸಭೆಯಿಂದ ದೂರವಿಡಲಾಗಿದೆ. ಕಳೆದ ಐದು ವರ್ಷಗಳಿಂದ ಒಂದೇ ಒಂದು ನೋಟಿಸ್ ಬಂದಿಲ್ಲ ಎಂದು ಆರೋಪಿಸಿದರು.

ರೈತ ಮಹಿಳೆ ಮಾಣಿಕ್ಯ ಚಿಲ್ಲೂರ ಮಾತನಾಡಿ, ತಾಲೂಕಿನಲ್ಲಿ 6-7 ಸಾವಿರ ಸದಸ್ಯರ ಪೈಕಿ ಕೆಲವರ ಸದಸ್ಯತ್ವವನ್ನು ಸಕಾರಣವಿಲ್ಲದೆ ರದ್ದು ಮಾಡಲಾಗಿದೆ. ಅವರ ಷೇರು ಹಣ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.

ನಾವು 1800 ಸದಸ್ಯರಿಗೆ ನೋಟಿಸ್ ಕಳಿಸಿದ್ದೇವೆ. ಕೆಲವೊಂದು ತಲುಪುವಲ್ಲಿ ವಿಳಂಬವಾಗಿದೆ. ಮರಣ ಹೊಂದಿದ ರೈತರ ಹೆಸರು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಸಭೆ ಕರೆದು ರೈತರ ದೂರಿನ ಬಗ್ಗೆ ಸಮಾಲೋಚನೆ ನಡೆಸಿ ಸರಿಪಡಿಸಲಾಗುವುದು. | ಯಾಸೀನ್ ರಾಯಚೂರು ಪಿಎಲ್​ಡಿ ಬ್ಯಾಂಕ್ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net