ರೈತರ ಪರಿಶ್ರಮಕ್ಕೆ ನೆಮ್ಮದಿ, ಸಾರ್ಥಕತೆ ಅಗತ್ಯ

18 HRS 01
Published on

ಹಿರೀಸಾವೆ: ಕೃಷಿ ಚಟುವಟಿಕೆಯಲ್ಲಿ ವರ್ಷವಿಡೀ ಶ್ರಮಿಸುವ ರೈತರ ಪರಿಶ್ರಮಕ್ಕೆ ತಕ್ಕಂತೆ ಫಸಲು ಸಿಕ್ಕರೆ ಮಾತ್ರ ನೆಮ್ಮದಿ ಹಾಗೂ ಸಾರ್ಥಕತೆ ಸಿಗಲಿದೆ ಎಂದು ಅರುಣೋದಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಮೆಡಿಕಲ್ ರಾಮೇಗೌಡ ಹೇಳಿದರು.


ಹೋಬಳಿಯ ದಿಡಗ ಗ್ರಾಮದ ಹೊಯ್ಸಳ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ಸಂಕ್ರಾಂತಿ ಹಾಗೂ ಸುಗ್ಗಿಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತನ ಬದುಕು ಎಂದಿಗೂ ಹಿಂದೆ ಉಳಿಯಬಾರದು ಎಂದರು.


ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದರೆ ದೇಶಕ್ಕೆ ಬರ ಬಡಿಯಲಿದೆ. ಸದಾ ಹಸನಾಗಿದ್ದರೆ ಮಾತ್ರ ದೇಶ ಸಮೃದ್ಧಿಯಾಗಿರುತ್ತದೆ. ಆದರೆ, ಇತ್ತೀಚಿನ ವರ್ಷಗಳಿಂದ ವಾಡಿಕೆಯಂತೆ ಮಳೆಯಾಗುತ್ತಿಲ್ಲ. ಇದರಿಂದ ಕೃಷಿಯನ್ನೇ ನಂಬಿರುವ ರೈತರ ಬದುಕು ಆರ್ಥಿಕವಾಗಿ ಹಿಂದೆ ಉಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.


ವಿದ್ಯಾರ್ಥಿಗಳು ಪರಸ್ಪರ ಎಳ್ಳು-ಬೆಲ್ಲ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಸಂಕ್ರಾಂತಿ ಹಾಗೂ ಸುಗ್ಗಿ ಹಬ್ಬದ ಹಾಡುಗಳಿಗೆ ನೃತ್ಯ ಮಾಡಿದರು. ಮುಖ್ಯಶಿಕ್ಷಕ ಬಿ.ಎಚ್.ನಂದೀಶ್, ಸಹಶಿಕ್ಷಕರಾದ ರವೀಶ್, ಪುಟ್ಟೇಗೌಡ, ಎಲಿಜೆಬತ್, ಶಶಿಕಲಾ, ಸುಮಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net