

ಗೋಕಾಕ: ಕೃಷಿ ಇಲಾಖೆಯಿಂದ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಲಾಗುತ್ತಿದ್ದು, ಗೊಬ್ಬರಕ್ಕಾಗಿ ರೈತರು ಆತಂಕಕ್ಕೊಳಗಾಗುವುದು ಬೇಡ ಎಂದು ಬೆಳಗಾವಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ಹೇಳಿದರು.
ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಬೇಕಾಗುವ ಯೂರಿಯಾ ರಸಗೊಬ್ಬರವನ್ನು ಹಂತ ಹಂತವಾಗಿ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ರೈತರಿಗೆ ಯೂರಿಯಾವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೊಬ್ಬರ ಖರೀದಿಸಿದ ರೈತರಿಗೆ ಅಧಿಕೃತ ರಶೀದಿಯನ್ನು ನೀಡಬೇಕು. ಅಂಗಡಿಯ ಮುಂದೆ ದರಪಟ್ಟಿಯ ಬೋರ್ಡ್‌ಗಳನ್ನು ಕಡ್ಡಾಯವಾಗಿ ಹಾಕಬೇಕು. ಯೂರಿಯಾ ರಸಗೊಬ್ಬರ ಜತೆಗೆ ಬೇರೆ ರಸಗೊಬ್ಬರಗಳನ್ನು ಲಿಂಕ್ ಮಾಡಿ ಕೊಡಬಾರದು.
ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಸಗೊಬ್ಬರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು. ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಗೆ ಆದ್ಯತೆ ಮೇರೆಗೆ 1500 ಮೆಟ್ರಿಕ್ ಟನ್ ಯೂರಿಯಾ ಪೂರೈಸಲಾಗುವುದು ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ್, ಮಾರಾಟಗಾರ ಸಂತೋಷ ಸೋನವಾಲ್ಕರ, ಗೋಕಾಕ, ಮೂಡಲಗಿ ತಾಲೂಕುಗಳ ಪ್ರತಿನಿಧಿಗಳಾದ ಧನಂಜಯ ಹಟ್ಟಿ ಹಾಗೂ ಎಸ್.ಆರ್. ಹೆಗಡೆ ಕೃಷಿ ಇಲಾಖೆಯ ಅಧಿಕಾರಿಗಳಾದ ಎಲ್.ಎನ್. ಕೌಜಗೇರಿ, ಎಸ್.ಬಿ. ಕರಗಣ್ಣಿ ಹಾಗೂ ಕರ್ನಾಟಕ ರಸಗೊಬ್ಬರ ಫೆಡರೇಷನ್ ವ್ಯವಸ್ಥಾಪಕರು, ರಸಗೊಬ್ಬರ ಮಾರಾಟಗಾರರು ಇದ್ದರು.
ಅಧಿಕ ರಸಗೊಬ್ಬರ ಬಳಸಿದರೆ ಭೂಮಿ ಫಲವತ್ತತೆ ಹಾಳು: ಚಿಕ್ಕೋಡಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಎಲ್.ಐ. ರೂಡಗಿ ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಗೆ ಜುಲೈ ತಿಂಗಳಲ್ಲಿ 1250 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಚಿಲ್ಲರೆ ರಸಗೊಬ್ಬರ ಮಾರಾಟಗಾರರಿಗೆ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರಬರಾಜು ಮಾಡಲಾಗಿದೆ. ರೈತರಿಗೆ ಯೂರಿಯಾ ಬದಲಿಗೆ ಅಮೋನಿಯಂ ಸಲ್ಫೇಟ್ ಬಳಕೆ ಮಾಡಲು ರಸಗೊಬ್ಬರ ಮಾರಾಟಗಾರರು ತಿಳಿಸಬೇಕು. ಶಿಫಾರಸು ಮಾಡಿದ್ದಕ್ಕಿಂತ 3-4 ಪಟ್ಟು ಯೂರಿಯಾ ಬಳಸುವುದರಿಂದ ಭೂಮಿ ಫಲವತ್ತತ್ತೆ ಹಾಳಾಗಿ ಸವಳು ಜವಳು ಆಗುತ್ತದೆ. ಆದ್ದರಿಂದ ರೈತರು ಹೆಚ್ಚು ರಸಗೊಬ್ಬರ ಬಳಕೆ ಮಾಡಬಾರದು ಎಂದರು.