ರೈತರ ಕೋಟಿಗಟ್ಟಲೆ ಹಣ ದುರ್ಬಳಕೆ: ಉಪಾಧ್ಯಕ್ಷನಿಂದಲೇ ದೂರು ದಾಖಲು; ಸಾರವಾಡ ಪಿಕೆಪಿಎಸ್‌ನಲ್ಲಿ ಭಾರಿ ಭ್ರಷ್ಟಾಚಾರ

Corruption
ಬಬಲೇಶ್ವರ ತಾಲೂಕಿನ ಸಾರವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ.
Published on

| ಪರಶುರಾಮ ಭಾಸಗಿ ವಿಜಯಪುರ

ರೈತರಿಗೆ ಬೆಳೆಸಾಲ, ರಾಸಾಯನಿಕ ಗೊಬ್ಬರ, ಔಷಧ, ಬಿತ್ತನೆ ಬೀಜ ಮುಂತಾದವುಗಳನ್ನು ಪೂರೈಸುವ ಮೂಲಕ ಕೃಷಿಯಲ್ಲಿ ಕ್ರಾಂತಿ ರೂಪಿಸುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಭ್ರಷ್ಟಾಚಾರದ ಕೂಪಗಳಾಗುತ್ತಿವೆ!

ಹೌದು, ಬಬಲೇಶ್ವರ ತಾಲೂಕಿನ ಸಾರವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬರೋಬ್ಬರಿ 1,76,18,014.44 (ಒಂದು ಕೋಟಿ ಎಪ್ಪತ್ತಾರು ಲಕ್ಷ ಹದಿನೆಂಟು ಸಾವಿರದ ಹದಿನಾಲ್ಕು ರೂಪಾಯಿ ನಲ್ವತ್ನಾಲ್ಕು ಪೈಸೆ) ದುರುಪಯೋಗ ಪಡಿಸಿಕೊಳ್ಳಲಾಗಿದೆ.

2021-22ನೇ ಸಾಲಿನ ಶಾಸನಬದ್ದ ಆಡಿಟ್ ವರದಿಯಲ್ಲಿ ಈ ಅಂಶ ಪತ್ತೆಯಾಗಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮಲ್ಲಪ್ಪ ಪಾರಶೆಟ್ಟಿ ಹಾಗೂ ಲೆಕ್ಕಿಗ ಶಿವಾನಂದ ಊರ್ಫ್ ಶಿವನಗೌಡ ಶ್ರೀಶೈಲ ಪಾರಶೆಟ್ಟಿ ಆರೋಪಿಯಾಗಿದ್ದಾರೆ. ಸಂಘದ ಉಪಾಧ್ಯಕ್ಷ ಬಸನಗೌಡ ರಾಮನಗೌಡ ಬಿರಾದಾರ ಎಂಬುವರು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

ಏನಿದು ಪ್ರಕರಣ?

ಸಾರವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮಲ್ಲಪ್ಪ ಪಾರಶೆಟ್ಟಿ ಹಾಗೂ ಲೆಕ್ಕಿಗ ಶಿವಾನಂದ ಊರ್ಫ್ ಶಿವನಗೌಡ ಶ್ರೀಶೈಲ ಪಾರಶೆಟ್ಟಿ ಸಾಮೂಹಿಕವಾಗಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. 2021-22ನೇ ಸಾಲಿಗೆ ಸಂಬಂಧಿಸಿದಂತೆ ಇಬ್ಬರೂ ಹಣ ದುರ್ಬಳಿಕೆ ಮಾಡಿಕೊಂಡಿದ್ದು, ಇದರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮಲ್ಪಪ್ಪ ಪಾರಶೆಟ್ಟಿ ಮೃತರಾಗಿದ್ದಾರೆ. ಹೀಗಾಗಿ ಈಗಿರುವ ಹಣದ ದುರ್ಬಳಿಕೆಗೆ ಸಂಬಂಧಿಸಿದಂತೆ ಲೆಕ್ಕಿಗ ಶಿವಾನಂದ ಊರ್ಫ್ ಶಿವನಗೌಡ ಶ್ರೀಶೈಲ ಪಾರಶೆಟ್ಟಿ ಅವರನ್ನು ಸಂಪೂರ್ಣ ಜವಾಬ್ದಾರರನ್ನಾಗಿಸಲಾಗಿದೆ.
ಈ ಹಿಂದೆಯೇ ಅಂದರೆ 2023 ಆ.31ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಶಿವಾನಂದನ ಮೇಲೆ ಪ್ರಕರಣ ದಾಖಲಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆ ಬಗ್ಗೆ ಠರಾವು ಕೂಡ ಮಂಡಿಸಲಾಗಿತ್ತು. ಬಳಿಕ 2023, ಸೆ.2ರಂದು ಬಬಲೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಆಡಿಟ್ ವರದಿಯಲ್ಲಿ ಏನಿದೆ?

ಸಂಘದ ಉಪ ಹಣಕಾಸು ಖಾತೆ (ಕ್ಯಾಶ್‌ಬುಕ್)ನಿಂದ ಮುಖ್ಯ ಹಣಕಾಸು ಖಾತೆಗೆ ಹಣವನ್ನು ಸರಿಯಾಗಿ ಜಮಾ ತೆಗೆದುಕೊಳ್ಳದೇ ಸಂಘದ ನಗದು ಶಿಲ್ಕಿನಲ್ಲಿ ವ್ಯತ್ಯಾಸ ಮಾಡಿ 16,82,848 ರೂಪಾಯಿ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಉಪ ಹಣಕಾಸು ಖಾತೆಯಲ್ಲಿ ಜಮಾ ಖರ್ಚಿನ ಬದಿಯಲ್ಲಿ ತಪ್ಪಾಗಿ ಲೆಕ್ಕ ಮಾಡಿ ಶಿಲ್ಕಿನಲ್ಲಿ ವ್ಯತ್ಯಾಸವುಂಟು ಮಾಡಿ 7,30,028 ರೂಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ. ಗೊಬ್ಬರ ಸ್ಟಾಕ್‌ದಲ್ಲಿ ಕೊರತೆಯನ್ನುಂಟು ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. 2021-22ನೇ ಸಾಲಿನಲ್ಲಿ ಸಾಲ ಮತ್ತು ಠೇವು ಯಾದಿಗೆ ಹಾಗೂ ಅಡಾವೆಗೆ ಅಂತರ ಮಾಡಿ 1,39,45,538-44 ರೂಪಾಯಿ ಸೇರಿ ಒಟ್ಟು 1,76,18, 014-44 ರೂಪಾಯಿ ದುರುಪಯೋಗ ಪಡಿಸಿಕೊಳ್ಳಲಾಗಿದೆ.
ಈ ಎಲ್ಲ ಹಣ ರೈತರು ಹಾಗೂ ಸರ್ಕಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ರೈತರಿಂದ ಎಫ್‌ಡಿ ಇರಿಸಿಕೊಂಡಿದ್ದು, ಸಾಲದ ಮೇಲಿನ ಬಡ್ಡಿ ಹಣ, ಫಿಗ್ನಿಗೆ ಸಂಬಂಧಿಸಿದಂತೆ ಸಂಗ್ರಹಗೊಂಡ ಹಣವಾಗಿದೆ. ದುರುಪಯೋಗಪಡಿಸಿಕೊಂಡ ಹಣ ಕೂಡಲೇ ಪಾವತಿಸುವಂತೆ ಈ ಮುಂಚೆಯೆ ಸೂಚಿಸಲಾಗಿದೆ. ಆದರೆ, ಗಡುವು ಮುಗಿದರೂ ಹಣ ಪಾವತಿಸದ ಹಿನ್ನೆಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪಾಧ್ಯಕ್ಷ ಬಸನಗೌಡ ರಾಮನಗೌಡ ಬಿರಾದಾರ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net