ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ

MEETINIG
Published on

ಯಾದಗಿರಿ: ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಇದ್ದರೂ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಬುಧವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಆವರಿಸಿರುವ ಕಾರಣ ಕೃಷಿ ಚಟುವಟಿಕೆ ಸುಗಮವಾಗಿ ನಡೆಯಲು ಯಾದಗಿರಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಪರಿಶೀಲಿಸಿ ಮಾತನಾಡಿದ ಅವರು, ಕೃಷಿಗೆ ಪೂರಕವಾದ ಯಂತ್ರಗಳು, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ಸಂಪೂರ್ಣ ಅನುಮತಿ ನೀಡಲಾಗಿದೆ. ಜಿಲ್ಲೆಯ ರೈತರು ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಿಕೊಳ್ಳುತ್ತಾರೆ. ಎಂತಹ ಸಂದಿಗ್ಧ ಪರಿಸ್ಥಿತಿಯಿದ್ದರೂ ರೈತ ಸಮುದಾಯಕ್ಕೆ ತೊಂದರೆಯಾದಲ್ಲಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದಂತೆ. ಈ ಹಿನ್ನೆಲೆಯಲ್ಲಿ ಕೃಷಿ ಪರಿಕರಗಳನ್ನು ರಾಜ್ಯದ ಎಲ್ಲ ಚೆಕ್ಪೋಸ್ಟ್ಗಳಲ್ಲಿ ಮುಕ್ತವಾಗಿ ಸಾಗಾಣಿಕೆ ಮಾಡಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿದರ್ೇಶನ ಕೊಡಲಾಗಿದೆ ಎಂದರು.

ಅಲ್ಲದೇ, ಕೃಷಿ ಉತ್ಪನ್ನಗಳ ಸುಗಮ ಮಾರಾಟ ಮತ್ತು ಸಾಗಾಣಿಕೆಗೆ ಅಂತರರಾಜ್ಯ ನಿರ್ಬಂಧಗಳನ್ನು ಕೂಡ ತೆಗೆದು ಹಾಕಲಾಗಿದೆ. ಆದಾಗ್ಯೂ ಕೆಲವು ಕಡೆಗಳಿಂದ ದೂರುಗಳು ಬರುತ್ತಿವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ತೊಂದರೆ ನೀಡುವಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದರು.
ರಾಜ್ಯದ ರೈತರ ಹಿತ ಕಾಪಾಡುವುದು ಹಾಗೂ ಬೆಳೆಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸದ್ಯಕ್ಕೆ ಕರೊನಾ ನಿಯಂತ್ರಣ ಮತ್ತು ನಿವಾರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಹಠಾತ್ತಾಗಿ ಬಂದಿರುವಂತಹ ಈ ಪರಿಸ್ಥಿತಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಕಾರಣ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ. ರೈತರು ಕೂಡ ಕೃಷಿ ಚಟುವಟಿಕೆ ಕೈಗೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ, ಸಕರ್ಾರ ಸೂಚಿಸಿರುವ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಮನವಿ ಮಾಡಿದರು.

ಮುಂಗಾರು ಬಿತ್ತನೆಗಾಗಿ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಸಕರ್ಾರ ಸನ್ನದ್ಧವಾಗಿದೆ. ಜಿಲ್ಲೆಯ ರೈತರು ಆತಂಕ ಪಡುವ ಅಗತ್ಯವಿಲ್ಲ. ಎಪಿಎಂಸಿ ಎಂದಿನಂತೆ ಕಾರ್ಯನಿರ್ವಹಿಸಬೇಕು. ಹಮಾಲರಿಗೆ ಪಾಸ್ ವಿತರಿಸಬೇಕು. ಇನ್ನು ತರಕಾರಿ, ಹಣ್ಣು-ಹಂಪಲುಗಳಿಗೆ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರಿಂದ ದೂರುಗಳು ಬರುವ ಮುನ್ನವೇ ಅವರ ಸಮಸ್ಯೆಗಳನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸುವವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಿಂದ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಸಚಿವರು, ರೈತರು ಬೆಳೆದ ಪಪ್ಪಾಯ, ಕಲ್ಲಂಗಡಿ, ತರಕಾರಿಗಳು ಹಾಗೂ ಕೊಳೆತು ಹೋಗುವ ಪದಾರ್ಥಗಳು, ಕೃಷಿಗೆ ಪೂರಕವಾಗಿರುವ ಮತ್ತು ರೈತರು ಹಾಗೂ ಸಾರ್ವಜನಿಕರಿಗೆ ಬೇಕಿರುವ ಅತೀ ಅಗತ್ಯ ವಸ್ತುಗಳ ವಹಿವಾಟು ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿ ಮುಕ್ತವಾಗಿ ಸಾಗಣೆ ಮತ್ತು ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಇದರ ಲಾಭ ಪಡೆದು ತಮ್ಮ ಬೆಳೆಗಳನ್ನು ಮಾರಾಟ ಮತ್ತು ಸಾಗಣೆ ಮಾಡಬೇಕು ಎಂದರು. ತೊಂದರೆಗಳುಂಟಾದಲ್ಲಿ ಕೃಷಿ ಅಧಿಕಾರಿಗಳು ಅಥವಾ ಸಹಾಯವಾಣಿಗಳನ್ನು ಸಂಪರ್ಕ ಮಾಡಬಹುದು ಎಂದು ಸಲಹೆ ನೀಡಿದರು.

ಶಾಸಕ ನರಸಿಂಹ ನಾಯಕ ಮಾತನಾಡಿ, ಸುರಪುರ ತಾಲೂಕಿನಲ್ಲಿ ಮಂಗಳವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆಗಳು ಹಾಳಾಗಿವೆ. ಸವರ್ೇ ನಡೆಸಬೇಕು. ಅಲ್ಲದೇ, ನಕಲಿ ಬೀಜ ಮಾರಾಟದ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ನಕಲಿ ಬೀಜ ಮಾರಾಟ ಮಾಡುವುದು ಕೊಲೆ ಮಾಡುವುದಕ್ಕಿಂತಲೂ ದೊಡ್ಡ ಅಪರಾಧ. ಇದರ ತಡೆಗಾಗಿ ವಿಜಿಲೆನ್ಸ್ ಕಮಿಟಿ ಇದ್ದು, ಎಷ್ಟೇ ಪ್ರಭಾವ ವ್ಯಕ್ತಿಗಳಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಹಾಪ್ಕಾಮ್ಸ್ ಮಳಿಗೆಗಳಿಲ್ಲ. ಹೀಗಾಗಿ ರೈತರಿಗೆ ತೊಂದರೆಯಾಗುತ್ತಿದ್ದು, ಮಳಿಗೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ್, ಜಿಲ್ಲೆಗೆ ರಸಗೊಬ್ಬರವನ್ನು ರೈಲ್ವೆ ಮೂಲಕ ಸಮರ್ಪಕವಾಗಿ ತರಿಸಿಕೊಳ್ಳಲು ರೈಲ್ವೆ ರೇಕ್ ಪಾಯಿಂಟ್ ಒದಗಿಸುವಂತೆ ಕೋರಿದರೆ, ಶಾಸಕ ಶರಣಬಸಪ್ಪ ದರ್ಶನಾಪುರ, ಜಿಲ್ಲೆಯ ಎಲ್ಲ ತಾಲೂಕಿನ ರೈತರಿಗೂ ಸಬ್ಸಿಡಿ ದರದಲ್ಲಿ ಭತ್ತದ ಬೀಜ ವಿತರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಉಪಾಧ್ಯಕ್ಷೆ ಗಿರಿಜಮ್ಮ ರೊಟ್ನಡಗಿ, ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net