ಸೌಲಭ್ಯ ಸ್ಥಗಿತಗೊಳಿಸಿದ್ದಕ್ಕೆ ರೈತರ ಆಕ್ರೋಶ: ಬಾಳೆ ಬೆಳೆ ಅಭಿವೃದ್ದಿಗೆ ನೀಡುತ್ತಿದ್ದ ಯೋಜನೆ ಮುಂದುವರೆಸುವಂತೆ ಒತ್ತಾಯ

Farmers met Horticulture Department Officer mandya
Published on

ಮಂಡ್ಯ: ನರೇಗಾ ಯೋಜನೆಯಡಿ ಬಾಳೆ ಬೆಳೆ ಅಭಿವೃದ್ದಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ಸ್ಥಗಿತಗೊಳಿಸಿರುವ ತೋಟಗಾರಿಕಾ ಇಲಾಖೆ ಕ್ರಮವನ್ನು ರೈತರು ಖಂಡಿಸಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿಯ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್ ಅವರನ್ನು ಭೇಟಿ ಮಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದ ಮುಖಂಡರು ನರೇಗಾ ಯೋಜನೆ ಬಾಳೆ ಬೆಳೆ ಸೌಲಭ್ಯಗಳನ್ನು ಮುಂದುವರಿಸುವಂತೆ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ನರೇಗಾ ಯೋಜನೆ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವುದು ರೈತರಿಗೆ ವರದಾನವಾಗಿದೆ. ಕೃಷಿ ಹೊಂಡ ನಿರ್ಮಾಣ, ಬದು ಹಾಕಿಕೊಳ್ಳುವುದು, ತೆಂಗು ಅಭಿವೃದ್ದಿ, ಬಾಳೆ ಬೇಸಾಯ ಮುಂತಾದ ಹತ್ತು ಹಲವು ತೋಟಗಾರಿಕಾ ಬೆಳೆಗಳಿಗೆ ನರೇಗಾ ಯೋಜನೆ ಅನುಕೂಲ ಕಲ್ಪಿಸುತ್ತಿತ್ತು. ಆದರೆ, ಏಕಾಏಕಿ ನರೇಗಾ ವ್ಯಾಪ್ತಿಯಿಂದ ಬಾಳೆ ಬೆಳೆಯನ್ನು ಹೊರಗಿಟ್ಟಿರುವುದು ರೈತರಿಗೆ ಮಾಡಿರುವ ಮಹಾವಂಚನೆ ಎಂದು ದೂರಿದರು.

ಕೆ.ಆರ್.ಪೇಟೆ ತಾಲೂಕಿನಲ್ಲಿ ಬಾಳೆ ಬೇಸಾಯ ಮಾಡುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಉಪಯುಕ್ತವಾದ ಬೇಸಾಯಕ್ಕೆ ತೋಟಗಾರಿಕಾ ಇಲಾಖೆ ಸಹಕಾರ ನೀಡದಿದ್ದರೆ ಸರ್ಕಾರದ ಯೋಜನೆಗಳಿಮದ ರೈತರಿಗೆ ಏನು ಪ್ರಯೋಜನ?. ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಸರ್ಕಾರ ತಾಲೂಕನ್ನು ಅಡಿಕೆ ಬೇಸಾಯ ಕೃಷಿ ವ್ಯಾಪ್ತಿಗೆ ಒಳಪಡಿಸದ ಕಾರಣ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಹಾಗೂ ತಾಂತ್ರಿಕ ನೆರವಿನ ಸಹಕಾರ ದೊರಕುತ್ತಿಲ್ಲ ಎಂದು ದೂರಿದರು.

ನರೇಗಾ ಯೋಜನೆ ಮೂಲಕವೂ ರೈತರು ಅಡಿಕೆ ಬೆಳೆಯಲು ಸೌಲಭ್ಯ ದೊರಕುತ್ತಿಲ್ಲ. ಸರ್ಕಾರ ಅಡಿಕೆ ಬೆಳೆಗೆ ಇರುವ ಪ್ರಾದೇಶಿಕ ಮಿತಿ ತೆಗೆದು ಹಾಕಿ ಅಡಿಕೆ ತೋಟಗಳ ಸಮಗ್ರ ಮಾಹಿತಿ ಪಡೆದು ತಮ್ಮ ಮೇಲಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿದರು. ಮಾತ್ರವಲ್ಲದೆ ನರೇಗಾ ಯೋಜನೆ ಮೂಲಕ ರೈತರು ಬೆಳೆದಿರುವ ಬೆಳೆಗಳಿಗೆ ಜಾಬ್ ಕಾರ್ಡ್‌ದಾರರ ಕೂಲಿ ಹಣವನ್ನು ಮಾತ್ರ ನೀಡುತ್ತಿದ್ದು, ರೈತರು ಕೊಂಡು ತಂದ ಪರಿಕರಗಳ ಸಾಮಗ್ರಿ ಬಿಲ್ ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಹಲವು ಸಲ ತಾಲೂಕು ರೈತಸಂಘ ಪ್ರತಿಭಟನೆ ಮಾಡಿದ್ದರೂ ಫಲ ಮಾತ್ರ ಸಿಕ್ಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಅಹವಾಲು ಆಲಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್, ಬಿಲ್ ಬಗ್ಗೆ ಉಂಟಾಗುತ್ತಿರುವ ತಾಂತ್ರಿಕ ದೋಷಗಳನ್ನು ವಿವರಿಸಿದರು. ಬಾಳೆ ಬೇಸಾಯಗಾರರಿಗೆ ಆಗುತ್ತಿರುವ ನಷ್ಟವನ್ನು ನಮ್ಮ ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು. ಸರ್ಕಾರದ ನಿರ್ದೇಶನವನ್ನು ನಾವು ಪಾಲಿಸಲೇಬೇಕಾಗಿದೆ ಎಂದು ಹೇಳಿದರು

ರೈತ ಮುಖಂಡರಾದ ಹೊನ್ನೇಗೌಡ, ಕೃಷ್ಣಾಪುರ ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net