

ಹುಬ್ಬಳ್ಳಿ: ರೈತರ ಹುತಾತ್ಮ ದಿನ ನಿಮಿತ್ತ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ನಗರದ ಚನ್ನಮ್ಮ ವೃತ್ತದಿಂದ ಎಪಿಎಂಸಿ ಆವರಣದವರೆಗೆ ಪಾದಯಾತ್ರೆ ನಡೆಸಿದರು.
ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮಳೆ ಲೆಕ್ಕಿಸದೇ ಪಾದಯಾತ್ರೆ ಆರಂಭಿಸಿದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ನೀರು ಸಲುವಾಗಿ ವಿವಿಧ ರೈತ ಸಂಘಟನೆಗಳು ಹೋರಾಟ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ರೈತರ ಕೃಷಿ ಪಂಪಸೆಟ್‌ಗಳಿಗೆ 8 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಸಬೇಕು. ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು. ಬರಗಾಲದಿಂದಾಗಿ ಮುಂಗಾರು ಹಾಗೂ ಹಿಂಗಾರು ಬೆಳೆ ಬಾರದೇ ಸಂಕಷ್ಟದಲ್ಲಿರುವ ರೈತರಿಗೆ 40 ಸಾವಿರ ರೂ. ಪರಿಹಾರ ಹಾಗೂ ಬೆಳೆವಿಮೆ ತಕ್ಷಣ ಬಿಡುಗಡೆ ಮಾಡಬೇಕು. ರೈತ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸವಲತ್ತು ಕೊಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡುವುದರ ಜತೆಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.
ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ನ್ಯಾಯಾಧೀಕರಣದ ಆದೇಶದಂತೆ ಮಹದಾಯಿ ಯೋಜನೆ ಶೀಘ್ರವೇ ಜಾರಿಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆಯು ಎಪಿಎಂಸಿಯ ವ್ಯಾಪಾರಸ್ಥರ ಸಂಘದ ಆವರಣಕ್ಕೆ ಬಂದು ತಲುಪಿತು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದ ರೈತರು, ಕೂಡಲೇ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರೈತರಿಗೆ ಯೋಚನೆ ಮಾಡುವ, ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಇದೆ. ರೈತರಿಗೆ ನಮ್ಮ ರಾಜ್ಯ ಸರ್ಕಾರದಿಂದ ಸಹಕಾರ ಇದೆ. ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಕಲ್ಲಪ್ಪ ಲಿಗಾಡಿ, ಜಿಲ್ಲಾಧ್ಯಾಕ್ಷ ರೂಕ ಕಿಲ್ಲೇದಾರ, ಉಪಾಧ್ಯಕ್ಷ ಮಂಜುನಾಥ ಕಾಲವಾಡ, ಧಾರವಾಡ ತಾಲೂಕು ಅಧ್ಯಕ್ಷ ಮಾರುತಿ ಸುಂಕದ, ಬಸವರಾಜ ಕುಂದಗೋಳ, ನಾಗರಾಜ ಬೆಳವಟಗಿ ಇತರರು ಇದ್ದರು.