

ಬೆಟ್ಟದಪುರ: ತಾಲೂಕಿನ ಚನ್ನಕಲ್ ಕಾವಲ್ ವ್ಯಾಪ್ತಿಯ ಸರ್ವೇ ನಂ.30 ಮತ್ತು ಗರೆಗುಡ್ಡ ಕಾವಲ್ ವ್ಯಾಪ್ತಿಯ ಸರ್ವೇ ನಂ.94ರ ಮೇಲೆ ಅರಣ್ಯ ಇಲಾಖೆಯು ತೆಗೆದುಕೊಂಡಿರುವ ಕ್ರಮವು ಸಾವಿರಾರು ರೈತರ ಮೇಲೆ ದೌರ್ಜನ್ಯ ಮಾಡಿದಂತೆ ಆಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರೈತ ಸಂಘ ಏಕೀಕರಣ ವತಿಯಿಂದ ಆ.20ಕ್ಕೆ ಬೆಂಗಳೂರಿನಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆನಂದಗೆರೆ ಮಂಜುನಾಥ್ ಗೌಡ ಹೇಳಿದ್ದಾರೆ.
ಈ ಎರಡು ಸರ್ವೇ ನಂಬರಿನ ಜಮೀನಿನನ್ನು ಅರಣ್ಯ ಇಲಾಖೆಯು ಮೀಸಲು ಅರಣ್ಯವನ್ನಾಗಿ ಮಾಡಲು ಹೊರಟಿರುವ ಅನ್ಯಾಯದ ಬಗ್ಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು, ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಪಾದಯಾತ್ರೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಇದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎಚ್ಚರಿಸಲಾಗುವುದು. ಈ ಹೋರಾಟವನ್ನು ಯಶಸ್ವಿಗೊಳಿಸಲು ತಾಲೂಕಿನ ರೈತರು ಆಧಾರ್ ಪ್ರತಿ ಮತ್ತು ಅನುಭವದ ಅರ್ಜಿಯ ಜತೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಬೇಕಾಗಿದೆ.
ಕಾರ್ಯಕ್ರಮಕ್ಕೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನೆ ಕೊಪ್ಪಳ, ರೈತ ಮುಖಂಡ ನಾಗರಾಜಗೌಡ, ಜಿಲ್ಲಾಧ್ಯಕ್ಷ ಜೈರಾಮೇಗೌಡ, ತಾಲೂಕು ಅಧ್ಯಕ್ಷರ ಕುಮಾರ್, ಹೋಬಳಿ ಅಧ್ಯಕ್ಷ ಸಣ್ಣೇಗೌಡ, ಶೇಕ್ ಈಬಾದ್ ಉಲ್ಲಾ, ಯೋಗೇಶ್, ಗಣೇಶ್, ಪಾಂಡು ಆಗಮಿಸಲಿದ್ದಾರೆ. ಕರ್ನಾಟಕ ರೈತ ಸಂಘ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಎಲ್ಲಾ ಏಕೀಕರಣ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.