ಬೆಸ್ಕಾಂ ಕಚೇರಿಗೆ ಬೀಗ ಜಡಿದ ರೈತರು

BRM RAITHA 04 (2)
Published on

ಭರಮಸಾಗರ: ಕೃಷಿ ಕ್ಷೇತ್ರಕ್ಕೆ ಸಮರ್ಪಕ ಮತ್ತು ಗುಣಮಟ್ಟದ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು, ಪಟ್ಟಣದ ಬೆಸ್ಕಾಂ ಕಚೇರಿಗೆ ಈಚೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬೆಸ್ಕಾಂ ಕಚೇರಿ ಬಳಿ ಜಮಾಯಿಸಿದ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ದಿಢೀರನೆ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ನಿಗದಿಪಡಿಸಿದಂತೆ ಏಳು ಗಂಟೆ ವಿದ್ಯುತ್ ಪೂರೈಸಬೇಕು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡಬಾರದು ಎಂದು ಒತ್ತಾಯಿಸಿದ ರೈತರು, ವಿದ್ಯುತ್ ಕಡಿತದಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಬಿತ್ತಿದ ಬೆಳೆಗಳು ಒಣಗುತ್ತಿವೆ ಎಂದು ಅಳಲು ತೋಡಿಕೊಂಡರು.

ಸರ್ಕಾರದ ನಿಯಮದ ಪ್ರಕಾರ 72 ಗಂಟೆಯೊಳಗೆ ಟಿಸಿ ಸರಿಪಡಿಸಬೇಕು. ಆದರೆ, ಅಧಿಕಾರಿಗಳು, ಸಿಬ್ಬಂದಿ ರೈತರನ್ನು ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ ಎಂದು ದೂರಿದರು.

ಪದೇ ಪದೆ ವಿದ್ಯುತ್ ಕಡಿತದ ಕುರಿತು ಯಾವುದೇ ರೀತಿಯ ಸ್ಪಷ್ಟನೆ, ಮಾಹಿತಿ ಅಧಿಕಾರಿಗಳು ನೀಡುತ್ತಿಲ್ಲ. ಮನವಿ ಸಲ್ಲಿಸಲು ಕಚೇರಿಗೆ ಆಗಮಿಸಿದರೂ ಇರುವುದಿಲ್ಲ ಎಂದು ಆರೋಪಿಸಿದರು.

ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲಾಗುವುದು. ಮುಂದೆ ಆಗುವ ನಷ್ಟ, ಸಮಸ್ಯೆಗಳಿಗೆ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net