ಮತ್ತೆ ಸುರಿದ ಮಳೆಗೆ ರೈತರ ಜಮೀನು ಜಲಾವೃತ

IMG20240728085007
Published on

ಹನಗೋಡು: ಕೊಡಗಿನ ಇರ್ಪು ಜಲಾಶಯದ ತೀರ ಪ್ರದೇಶ ಸೇರಿದಂತೆ ಹನಗೋಡು ಭಾಗದಲ್ಲಿ ಮತ್ತೆ ಭಾರಿ ಜಡಿಮಳೆ ಸುರಿಯುತ್ತಿರುವುದರಿಂದ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಹನಗೋಡು ಅಣೆಕಟ್ಟೆ ಹಿನ್ನೀರಿಗೆ ಹೊಂದಿಕೊಂಡಂತೆ ಸಾವಿರಾರು ಎಕರೆ ಜಮೀನುಗಳಲ್ಲಿ ನೀರು ನುಗ್ಗಿರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಹನಗೋಡು ಹೋಬಳಿಯ ಹತ್ತಾರು ಹಳ್ಳಿಗಳಲ್ಲಿ ನದಿಯ ಹಿನ್ನೀರಿನಿಂದ ರೈತರು ಬೆಳೆದಿದ್ದ ಶುಂಠಿ, ತಂಬಾಕು, ಮುಸುಕಿನ ಜೋಳ ಬೆಳೆ ನೀರಿನಲ್ಲಿ ಮುಳುಗಿ ಕೊಳೆಯಲಾರಂಭಿಸಿರುವುದರಿಂದ ಬೆಳೆಗಳು ನಾಶವಾದರೆ ಗತಿ ಏನು ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.


ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದ ಪ್ರಭಾಕರ್, ಕಾಳಿಂಗೇಗೌಡ, ಚೆಲುವೇಗೌಡ, ನಾರಾಯಣ್ ರಾವ್, ಕೆ.ಜಿ.ಹೆಬ್ಬನಕುಪ್ಪೆಯ ಸುಂದರಮ್ಮ ಸೇರಿದಂತೆ ಹಲವು ರೈತರ ಶುಂಠಿ, ತಂಬಾಕು, ಮುಸುಕಿನ ಜೋಳ ಬೆಳೆ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಳೆಯುತ್ತಿವೆ. ಇದಲ್ಲದೆ ಬಿಲ್ಲೇನಹೊಸಳ್ಳಿ ನೇಗತ್ತೂರು, ಸಿಂಡೇನಹಳ್ಳಿ, ಅಬ್ಬೂರು, ಹನಗೋಡು, ಕೊಳುವಿಗೆ, ಮುದಗನೂರು, ಚಿಕ್ಕೆಹೆಜ್ಜೂರು, ದೊಡ್ಡಹೆಜ್ಜೂರು, ದಾಸನಪುರ, ಹಿಂಡಗುಡ್ಲು, ಕಿರಂಗೂರು ಹರಳಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಲಕ್ಷ್ಮಣ ತೀರ್ಥ ನದಿಯಂಚಿನಲ್ಲಿರುವ ಜಮೀನಿನ ಬೆಳೆಗಳೆಲ್ಲ ಮಳೆ ಹಾಗೂ ನದಿ ನೀರಿನಿಂದ ಜಲಾವೃತಗೊಂಡಿವೆ.


ಮನೆಗಳಿಗೆ ಹಾನಿ: ನೇರಳಕುಪ್ಪೆ ಗ್ರಾ.ಪಂ ವ್ಯಾಪ್ತಿಯ ಕಚುವಿನಹಳ್ಳಿ ಗ್ರಾಮದ ಕಾಳಮ್ಮ, ನಾಗರಾಜಚಾರಿ ಅವರ ವಾಸದ ಮನೆಗಳು ಮಳೆಯ ಹೊಡೆತಕ್ಕೆ ಸಿಲುಕಿ ಗೋಡೆಗಳು ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net