ಜಮೀನುಗಳಿಗೆ ತೆರಳಲು ಇಲ್ಲ ಮಾರ್ಗ; ಕುಷ್ಟಗಿ-ಹನುಮಸಾಗರ ರಸ್ತೆ ಸಂಚಾರ ಬಂದ್

HNMR PROTEST
ಹನುಮಸಾಗರ ಸಮೀಪದ ಹೊಸಹಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಪಿಎಸ್‌ಐ ಅಶೋಕ ಬೇವೂರು, ಹನುಮಸಾಗರ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಭೇಟಿ ನೀಡಿ ರೈತರ ಜತೆ ಚರ್ಚಿಸಿದರು. ರೈತರಾದ ಪರಸಪ್ಪ ಪೂಜಾರಿ, ಶರಣಪ್ಪ ವ್ಯಾಪಾರಿ, ಪೊಲೀಸ್ ಸಿಬ್ಬಂದಿ ಸಿದ್ದು ನವಲಿ, ಕಳಕಪ್ಪ ಚೌಧರಿ ಇತರರಿದ್ದರು.
Published on

ಹನುಮಸಾಗರ: ರೈತರು ತಮ್ಮ ಜಮೀನುಗಳಿಗೆ ತೆರಳಲು ಸೂಕ್ತ ರಸ್ತೆ ಒದಗಿಸುವಂತೆ ಒತ್ತಾಯಿಸಿ ಹೊಸಹಳ್ಳಿ ಗ್ರಾಮದ ರೈತರು ಕುಷ್ಟಗಿ-ಹನುಮಸಾಗರ ಮುಖ್ಯರಸ್ತೆಯಲ್ಲಿ ಬುಧವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ಹೊಸಹಳ್ಳಿ ಗ್ರಾಮದಿಂದ ಮಡಿಕೇರಿ ಗ್ರಾಮಕ್ಕೆ ತೆರಳಲು ಹನುಮಪ್ಪ ಯಮನೂರಪ್ಪ ದೂಳನ್ನವರ ಹೊಲದಿಂದ ಹಳ್ಳದ ಮಾರ್ಗವಾಗಿ ಎತ್ತಿನಬಂಡಿ ರಸ್ತೆಯನ್ನು ಅವಲಂಬಿಸಲಾಗಿತ್ತು. ಆದರೆ, ಇತ್ತೀಚೆಗೆ ದೂಳನ್ನವರ ಕುಟುಂಬದಲ್ಲಿ ಸಹೋದರರು ಪ್ರತ್ಯೇಕವಾಗಿದ್ದು, ಜಮೀನುಗಳಿಗೆ ತೆರವಳು ರಸ್ತೆಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಹನುಮಸಾಗರ ಮೂಲಕ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ನೂರಾರು ರೈತರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇದರ ಬಗ್ಗೆ ಸರ್ವೇ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರ್‌ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಮದ ನಕಾಶೆ ಇಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಮ್ಮ ಗ್ರಾಮದ ನಕಾಶೆ ಇಲ್ಲ ಎಂದಾದರೆ, ಯಾವುದೇ ವಾಹನಗಳನ್ನು ನಮ್ಮ ಗ್ರಾಮದಿಂದ ಸಂಚರಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಸ್ಥಳಕ್ಕೆ ಪಿಎಸ್‌ಐ ಅಶೋಕ ಬೇವೂರ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಹನುಮಸಾಗರ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಭೇಟಿ ನೀಡಿ, ಸಮಸ್ಯೆ ಬಗ್ಗೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಚರ್ಚಿಸುವುದಾಗಿ ಪ್ರತಿಭಟನಾನಿರತರ ಮನವೊಲಿಸಿದರು.
ರೈತರಾದ ಪರಸಪ್ಪ ಪೂಜಾರಿ, ಶರಣಪ್ಪ ವ್ಯಾಪಾರಿ, ಯಮನಪ್ಪ ಹಂಚಿನಾಳ, ಬುಡ್ಡಪ್ಪ ವ್ಯಾಪಾರಿ, ಸಿದ್ದಪ್ಪ, ಹನುಮಂತ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net