

ಹುಕ್ಕೇರಿ: ರೈತರ ನೀರಾವರಿ ಅನುಕೂಲಕ್ಕಾಗಿ ಕೆರೆಗಳ ನಿರ್ಮಾಣ ಮತ್ತು ಅವುಗಳಿಗೆ ನೀರು ತುಂಬಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು. ಸಮರ್ಪಕ ಬೀಜ, ರಸಗೊಬ್ಬರಗಳ ವಿತರಣೆ ಮಾಡಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದಕ್ಕೆ ಸ್ಥಳ ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಉಮೇಶ ಕತ್ತಿ ಸೂಚಿಸಿದರು.
ಶುಕ್ರವಾರ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕಟ್ಟಡ, ಗ್ರಾಮಗಳಲ್ಲಿ ಚಾವಡಿ ನಿರ್ಮಾಣ, ಕೆರೆ ನಿರ್ಮಾಣ ಕಾಮಗಾರಿಗಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ಮತ್ತು ಪರಿಶಿಷ್ಟ ಜಾತಿ/ ಪಂಗಡದವರಿಗಾಗಿ ಡಾ. ಅಂಬೇಡ್ಕರ್, ಜಗಜೀವನರಾಮ್ ಮತ್ತು ವಾಲ್ಮೀಕಿ ಭವನಗಳ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ಆದೇಶಿಸಿದರು.
ತಾಲೂಕಿನಲ್ಲಿ 7 ಸಾವಿರದಷ್ಟು ಅಸಂಘಟಿತ ಕಾರ್ಮಿಕರಿದ್ದು, ಅವರಲ್ಲಿ ಕೇವಲ 4 ಸಾವಿರ ಜನರನ್ನು ಮಾತ್ರ ಗುರುತಿಸಿ ಪರಿಹಾರ ಧನ ವಿತರಿಸಿದ್ದಕ್ಕೆ ಆಕ್ರೋಶಗೊಂಡ ಶಾಸಕರು, ಸಂಕಟದಲ್ಲಿರುವ ಕಾರ್ಮಿಕರನ್ನು ಗುರುತಿಸಲು ಆಗದಿದ್ದರೆ ನೀವು ಇರುವುದೇಕೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ತಕ್ಷಣ ಅವರನ್ನು ಹುಡುಕಿ ಪರಿಹಾರ ಧನ ತಲುಪಿಸಬೇಕು ಎಂದರು. ಕರೊನಾ ಸಂತ್ರಸ್ತರಿಗೆ ಬಂದ ಒಂದು ಸಾವಿರ ಕಿಟ್ ಪೈಕಿ ಕೇವಲ 500 ಜನರಿಗೆ ವಿತರಿಸಿ ಉಳಿದವುಗಳನ್ನು ಹಾಗೇ ಇಟ್ಟುಕೊಂಡಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್ ಅಶೋಕ ಗುರಾಣಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ತಾಪಂ ಇಒ ಎಂ.ಎಸ್. ಬಿರಾದಾರಪಾಟೀಲ, ಪಿಡಬ್ಲುೃಡಿ ಎ.ಇ.ಇ. ಎಸ್.ಕೆ. ಹುಕ್ಕೇರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ರೈತರಿಗೆ 5 ಸಾವಿರ ರೂ. ಪರಿಹಾರ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಗೋವಿನ ಜೋಳ ಬೆಳೆದ ಸುಮಾರು 22 ಸಾವಿರ ರೈತ ಕುಟುಂಬಗಳು ಕರೊನಾದಿಂದ ಮಾರುಕಟ್ಟೆ ಇಲ್ಲದೆ ತತ್ತರಿಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇವರ ನೆರವಿಗೆ 5 ಸಾವಿರ ರೂ. ಪರಿಹಾರ ವಿತರಿಸಲಾಗುತ್ತಿದೆ ಎಂದರು.