ಬಿಡದಿ ಟೌನ್​ಶಿಪ್​ ನಿರ್ಮಾಣಕ್ಕೆ ರೈತರ ಹಿತ ಅಗತ್ಯ

township
Published on

ರಾಮನಗರ: ಟೌನ್​ಶಿಪ್​ನಷ್ಟೇ ರೈತರ ಬದುಕು ಮುಖ್ಯ. ಈ ಹಿನ್ನೆಲೆಯಲ್ಲಿ ಬಿಡದಿ ಟೌನ್​ಶಿಪ್​ ನಿರ್ಮಾಣ ಮಾಡಬೇಕಾದರೆ ರೈತರ ಹಿತ ಕಾಯಬೇಕು ಎಂದು ಶಾಸಕ ಎಚ್​.ಸಿ. ಬಾಲಕೃಷ್ಣ ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿಗೆ ಸೂಚನೆ ನೀಡಿದರು.

ನಗರದ ಕಂದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಧಿಕಾರದ 7ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಟೌನ್​ಶಿಪ್​ ನಿರ್ಮಾಣ ಸಂಬಂಧ ಪ್ರಾಧಿಕಾರದಿಂದ ತಮಗೆ ಹಾಗೂ ರೈತರಿಗೆ ಸ್ಪಷ್ಟನೆ ಬೇಕಿದೆ. ಈಗಾಗಲೇ ಭೂ ಸ್ವಾಧಿನ ಸಂಬಂಧ ಅಧಿಸೂಚನೆ ಮತ್ತು ನೋಟಿಸ್​ ನೀಡಲಾಗಿದೆ. ಯೋಜನೆ ಯಶಸ್ವಿಯಾಗಬೇಕಾದರೆ ರೈತರಿಗೆ ಸಮಸ್ಯೆಗೆ ಸ್ಪಂಧಿಸಿ ಅವರ ನೋವುಗಳಿಗೆ ಧನಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಆಗಬೇಕಾದರೆ ಮೊದಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅವರ ಬೇಡಿಕೆಗಳನ್ನು ಈಡೇರಿಸಿ ಇದು ಪ್ರಾಧಿಕಾರದ ಕೆಲಸ ಎಂದು ಎಚ್ಚರಿಸಿದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ಗೊಂದಲ ಮೂಡಿಸಬಾರದು ಸ್ಪಷ್ಟತೆಯೊಂದಿಗೆ ಕೆಲಸ ಮಾಡಿ ಎಂದು ಸೂಚಿಸಿದರು.

ಯೋಜನೆ ಅನುಷ್ಠಾನ ಮಾಡುವಾಗ ಗ್ರಾಮ ಠಾಣ ಪರಿಮಿತಿ, ಶಾಲೆಗಳು, ಹುಲ್ಲುಗಾವಲು ಮೀಸಲು, ಕೆರೆಗಳು, ಸಮೂದಾಯ ಭವನಗಳಿಗೆ ವಿನಾಯಿತಿ ಮಾನದಂಡಗಳನ್ನು ಅನುಸರಿಸಬೇಕು. ರೈತರಿಗೆ ನ್ಯಾಯಯುತವಾದ ಮಾರುಕಟ್ಟೆ ಬೆಲೆ ಕೊಡಿ ಎಂದು ನಿರ್ದೇಶನ ನೀಡಿದರು.

ಈ ವೇಳೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್​ ನಟರಾಜ್​, ಡಿಸಿಎಂ ಡಿ.ಕೆ. ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಎಚ್​.ಸಿ. ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಾಧಿಕಾರ ಬದ್ಧವಾಗಿದೆ. ಟೌನ್​ಶಿಪ್​ ನಿರ್ಮಾಣದಟ್ಟೇ ಮುಖ್ಯವಾದ ಕೆಲಸ ರೈತರ ಬದುಕು ಕಾಪಾಡುವುದು ಎನ್ನುವ ಸಂಕಲ್ಪ ಪ್ರಾಧಿಕಾರದ್ದು. ರೈತರ ಎಲ್ಲ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ನೀಡಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪ್ರಾಧಿಕಾರದ ಆಯುಕ್ತ ರಾಜೇಂದ್ರ ಚೋಳನ್​, ಉಪ ಆಯುಕ್ತ ಮಾರುತಿ ಪ್ರಸನ್ನ, ತಹಸೀಲ್ದಾರ್​ಗಳಾದ ಚೇತನಾ, ಮೇನಾ, ನಿರ್ದೇಶಕರಾದ ರಮೇಶ್​, ಪುಟ್ಟಯ್ಯ, ನರಸಿಂಹಯ್ಯ, ಕಲ್ಯಾಣ ಕುಮಾರಿ ಮುಂತಾದವರು ಇದ್ದರು.

520 ಕೋಟಿ ರೂ. ಮೀಸಲು

ಟೌನ್​ಶಿಪ್​ ನಿರ್ಮಾಣವಾಗುವ ವ್ಯಾಪ್ತಿಗೆ ಒಳಪಡುವ ಕಲುಷಿತಗೊಂಡಿರುವ ಭೈರಮಂಗಲ ಕೆರೆ ಶುದ್ಧೀಕರಣ ಹಾಗೂ ಕಲುಷಿತ ನೀರಿನ ಶುದ್ಧೀಕರಣ ಟಕ ನಿರ್ಮಾಣಕ್ಕಾಗಿ ಬೆಂಗಳೂರು ಜಲ ಮಂಡಳಿ 520 ಕೋಟಿ ರೂ. ಮೀಸಲಿಟ್ಟು, ಇದಕ್ಕಾಗಿ ಸೂಕ್ತ ಸ್ಥಳಾವಕಾಶ ನೀಡುವಂತೆಯೂ ಕೋರಿದ್ದು, ಈ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net