

ಬೆಳ್ವೆ: ರೈತರು ವಿವಿಧ ಕಾರಣಗಳಿಂದ ಕೃಷಿ ಬೆಳೆಗಳಿಂದ ಹಿಂದೆ ಸರಿದು ತೋಟಗಾರಿಕೆಯ ಮಿಶ್ರ ಬೆಳೆಗಳತ್ತ ಆಸಕ್ತಿ ಹೊಂದುತ್ತಿದ್ದಾರೆ. ತೆಂಗು ಬೆಳೆಯೂ ಕುಂಠಿತಗೊಳ್ಳುತ್ತಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ಅಡಕೆ ಬೆಳೆ ಲಾಭದಾಯಕವಾದರೂ ಹವಮಾನ ವೈಪರೀತ್ಯ ಹಾಗೂ ಹಳದಿ ರೋಗ, ಎಲೆಚುಕ್ಕೆ ರೋಗಗಳು ಬಾಧಿಸುತ್ತಿರುವುದರಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು. ಬೆಳ್ವೆಯಲ್ಲಿ ಸೋಮವಾರ ಅಡಕೆ ಮತ್ತು ತೆಂಗು ಬೆಳೆ ಕೀಟ ಮತ್ತು ರೋಗ ನಿರ್ವಹಣೆ ತರಬೇತಿ ಸಂವಾದ ಹಾಗೂ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಳ್ವೆ ಗ್ರಾಪಂ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಅಧ್ಯಕ್ಷ ಬಿ.ಸತೀಶ್ ಕಿಣಿ, ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ದೇಶ ಸಹಕಾರಿ ಸಂಘ ಪ್ರಭಾರ ಅಧ್ಯಕ್ಷ ಕೃಷ್ಣ ನಾಯ್ಕ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಚಂದ್ರಶೇಖರ್ ಶೆಟ್ಟಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಸದಸ್ಯ ಎಚ್.ವಸಂತ ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ನಿರ್ದೇಶಕ ಡಾ.ಬಿ.ಧನಂಜಯ್, ಕೀಟಶಾಸ್ತ್ರ ತಜ್ಞ ಡಾ.ರೇವಣ್ಣ, ಡಾ.ಚೈತನ್ಯಾ ಎಚ್.ಎಸ್. ಮಾಹಿತಿ ನೀಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಪ್ರಶಾಂತ್ ಗುಮ್ಮೋಲ ಸ್ವಾಗತಿಸಿದರು. ಪಲ್ಲವಿ ರೈತಗೀತೆ ಹಾಡಿದರು. ಪ್ರವೀಣ್ ಲೋಬೊ ನಿರೂಪಿಸಿದರು. ಪೃಥ್ವೀಜ್‌ಕುಮಾರ್ ಶೆಟ್ಟಿ ವಂದಿಸಿದರು.
ಇತ್ತೀಚಿನ ದಿನಗಳಲ್ಲಿ ಇಳುವರಿ ಕುಂಠಿತ, ಪ್ರಾಣಿಗಳ ಹಾವಳಿ ಇನ್ನಿತರ ಕಾರಣದಿಂದ ಭತ್ತ ಬೆಳೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ತೆಂಗು, ಅಡಕೆ, ಕಾಳುಮೆಣಸು, ಕೋಕೋ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಕೃಷಿಕರು ಇಂಥ ತರಬೇತಿಗಳಲ್ಲಿ ಪಾಲ್ಗೊಂಡು ಸೂಕ್ತ ಮಾಹಿತಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು - ಕಿರಣ್‌ಕುಮಾರ್ ಕೊಡ್ಗಿ, ಶಾಸಕ