

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಶತಮಾನದ ಸಂಭ್ರಮದಲ್ಲಿದ್ದು, ಅ. 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶತಮಾನ ಭವನವನ್ನು ಉದ್ಘಾಟಿಸಲಿದ್ದಾರೆ.
ಮೈಸೂರು ಅರಸರು ನಿರ್ಮಿಸಿದ ವಿವಿ ಸಾಗರ, ಗಾಯತ್ರಿ ಜಲಾಶಯ, ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಯ ಕೃಷಿಕರ ಆಧಾರ ಸ್ತಂಭಗಳಾಗಿವೆ. 1916ರಲ್ಲಿ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯ, ದಿವಾನ್ ಸರ್.ಎಂ.ವಿಶ್ವೇಶ್ವರಯ್ಯ ಮಾರ್ಗದರ್ಶನದಲ್ಲಿ ಮೈಸೂರಿನ ಮೊದಲ ಕೃಷಿ ನಿರ್ದೇಶಕ ಎಂಬ ಹೆಗ್ಗಳಿಕೆ ಪಡೆದಿದ್ದ ಡಾ.ಲೆಸ್ಲೀ ಕೋಲ್ ಮನ್ ಅವರು ಬಬ್ಬೂರು ಸಮೀಪ 200 ಎಕರೆ ಭೂ ಪ್ರದೇಶದಲ್ಲಿ ವಲಯ ಕೃಷಿ-ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಿದರು.
2000ರಲ್ಲಿ ಕೃಷಿ ವಿಜ್ಞಾನ ಕೇಂದ್ರ, 2010ರಲ್ಲಿ ತೋಟಗಾರಿಕೆ ಕಾಲೇಜು ಆರಂಭವಾಯಿತು. 1965ರಲ್ಲಿ ಬೆಂಗಳೂರಿನ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ ಸ್ಥಾಪಿತವಾಗಿದ್ದು, ಬಬ್ಬೂರು ಕೃಷಿ ಸಂಶೋಧನಾ ಕೇಂದ್ರವು ಸದರಿ ಕೃಷಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಟ್ಟಿತು. 2003 ರಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರವಾಗಿ ಉನ್ನತೀಕರಣ, 2013ರಿಂದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿದೆ.
ಹೆಜ್ಜೆ ಗುರುತು: ಬಯಲುಸೀಮೆ ಕೃಷಿಕರ ಮಾಹಿತಿ ಕಣಜ ಎಂದು ಖ್ಯಾತಿ ಪಡೆದಿರುವ ಕೇಂದ್ರ ಜಿಲ್ಲೆಯ ಹವಾಗುಣ, ಒಣ ಬೇಸಾಯಕ್ಕೆ ಪೂರಕವಾದ ಸಂಶೋಧನೆ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿ, ಪುನಶ್ಚೇತನ, ಬೇಸಾಯ ತಂತ್ರಜ್ಞಾನ, ಹೊಸ ತಳಿಕಳ ಅಭಿವೃದ್ಧಿ, ತೋಟಗಾರಿಕೆ ಬೆಳೆಗಳಲ್ಲಿ ಸುಧಾರಿತ ಯಂತ್ರೋಪಕರಣ, ತಂತ್ರಜ್ಞಾನ ಕುರಿತು ಇಲ್ಲಿನ ವಿಜ್ಞಾನಿಗಳು ಸಂಶೋಧನೆ ಮೂಲಕ ಕೃಷಿ ಕ್ಷೇತ್ರದ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.
ಸಿಎಂ ಮೊದಲ ಭೇಟಿ: ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದು, 2018ರಲ್ಲಿ ಸಿಎಂ ಆಗಿದ್ದ ವೇಳೆ ಹಿರಿಯೂರಿಗೆ ಭೇಟಿ ನೀಡಿದ್ದರು. ಈ ಬಾರಿಯೂ ಹಿರಿಯೂರಿಗೆ ಅ. 6ರ ಭೇಟಿ ಮೂಲಕ ಜಿಲ್ಲೆಗೆ ಆಗಮಿಸುತ್ತಿರುವುದು ವಿಶೇಷ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಸಚಿವ ಡಿ.ಸುಧಾಕರ್, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿ ಅನೇಕ ಜನಪ್ರತಿನಿಧಿಗಳು, ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೆಳದಿ ಶಿವಪ್ಪ ನಾಯಕ ವಿವಿ ಕುಲಪತಿ, ಕೃಷಿ-ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ತೋಟಗಾರಿಕೆ ವಿವಿ ಬೇಡಿಕೆ: ಭದ್ರೆ ಬಯಲುಸೀಮೆ ಸ್ಪರ್ಶಿಸಿದ ನಂತರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತರಣೆಯಾಗಿದ್ದು, ಮಧ್ಯ ಕರ್ನಾಟಕದ ಕೃಷಿಕರಿಗೆ ನೆರವಾಗಲು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಿದರೆ ತೋಟಗಾರಿಕೆ ಬೆಳೆಗಳ ಸಂಶೋಧನೆ, ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಈ ಕುರಿತು ರೈತಮುಖಂಡರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದಾರೆ.
ತೋಟಗಾರಿಕೆ ವಿದ್ಯಾಲಯ: 2010ರಲ್ಲಿ ತೋಟಗಾರಿಕೆ ಕಾಲೇಜ್ ಸ್ಥಾಪನೆಯಾಗಿದ್ದು. ಗುಣಮಟ್ಟದ ಶಿಕ್ಷಣ-ಸಂಶೋಧನೆ ಮೂಲಕ ದೇಶದ ಗಮನ ಸೆಳೆದಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು 4 ವರ್ಷದ ಸ್ನಾತಕೋತ್ತರ ಕೃಷಿ ಪದವಿ ಪಡೆಯಲು ಇಲ್ಲಿಗೆ ಬರುತ್ತಾರೆ. ಸುಸಜ್ಜಿತ ಕ್ಯಾಂಪಸ್ ಹೊಂದಿದ್ದು, 24 ಬೋಧಕರು ಇದ್ದು, 369 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2017ರಲ್ಲಿ ಅಖಿಲ ಭಾರತ ತೋಟಗಾರಿಕೆ ವಿಜ್ಞಾನದ ಸ್ಪರ್ಧಾತ್ಮಕ (ಸ್ನಾತಕೋತ್ತರ ಪದವಿ) ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‌್ಯಾಂಕ್ ಪಡೆದಿರುವುದು ಕಾಲೇಜಿನ ಹೆಗ್ಗಳಿಕೆ. ( 2017ರಲ್ಲಿ 1, 3, 6, 19, 26, 35, 57, 353ನೇ ರ‌್ಯಾಂಕ್ ಪಡೆದಿರುವುದು ದಾಖಲೆ)
ಕೇಂದ್ರದ ಕ್ಯಾಂಪಸ್‌ನಲ್ಲಿ ಹವಾಮಾನ ವೀಕ್ಷಣಾಲಯ, ಕೃಷಿ ಯಂತ್ರಗಳ ಪರೀಕ್ಷೆ, ತರಬೇತಿ ಕೇಂದ್ರವಿದೆ. ಇದು ಮಧ್ಯ ಕರ್ನಾಟಕದ ಏಕೈಕ ಕೇಂದ್ರ ಎಂಬುದು ನಮ್ಮ ಚಿತ್ರದುರ್ಗ ಜಿಲ್ಲೆಯ ಹೆಮ್ಮೆ.
ಶಿಷ್ಟಾಚಾರ: ಬಬ್ಬೂರು ಕೃಷಿ ವಿಜ್ಞಾನ-ಸಂಶೋಧನಾ ಕೇಂದ್ರದ ಶತಮಾನ ಸಂಭ್ರಮ ಸಮಾರಂಭಕ್ಕೆ , ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಶತಮಾನೋತ್ಸವ ಸಮಾರಂಭ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ, ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಸಿದ್ದಪಡಿಸಲಾಗುವುದು.- ಡಾ.ಕೆ.ಮಂಜಪ್ಪ ಡೀನ್, ತೋಟಗಾರಿಕೆ ಕಾಲೇಜ್